ಗೋಣಿಕೊಪ್ಪ: ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಸೂಕ್ತ ವೇದಿಕೆ ಕಲ್ಪಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪೊನ್ನಂಪೇಟೆ ತಾಲೂಕಿನ ನಲ್ಲೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು.
ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಇಲಾಖೆ, ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಮಾಯಮುಡಿ ಸಹಭಾಗಿತ್ವದಲ್ಲಿ ನಲ್ಲೂರಿನ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾಯಾಮುಡಿ ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಪಂ ಮಾಜಿ ಅಧ್ಯಕ್ಷ ತೀತರಮಾಡ ಎಸ್.ಕುಶಾಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದರೂ ಗ್ರಾಮದ ದಾನಿಗಳ ಸಹಕಾರದಿಂದ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಂಡು ಮಕ್ಕಳ ಪ್ರತಿಭೆಯನ್ನು ತೋರಿಸಲು ಮುಂದಾದ ಎಲ್ಲ ಶಾಲೆಯ ಶಿಕ್ಷಕರಿಗೂ ಹಾಗೂ ಸ್ಥಳೀಯ ಯುವಕ ಸಂಘದ ಅಧ್ಯಕ್ಷರ ಶ್ರಮ ಶ್ಲಾಘನೀಯ ಎಂದರು.
ಗ್ರಾಪಂ ಮಾಜಿ ಸದಸ್ಯ ಪುಳ್ಳಂಗಡ ಎಸ್.ಗಣಪತಿ ಮಾತನಾಡಿ, ಹತ್ತಾರು ವರ್ಷದ ಹಿಂದೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕಾಗಿತ್ತು. ಆದರೂ ತಡವಾಗಿ ಕ್ಲಸ್ಟರ್ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸಿಕೊಂಡು ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿ ತಿರನೆಲ್ಲಿ ಮಾಡ ರಮಾನಂದ ದೇವಯ್ಯ, ಮಾಯಮುಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸವಿತಾ ಕುಮಾರಿ ಮಾತನಾಡಿದರು.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಯಮುಡಿ ಸರ್ಕಾರಿ ಪ್ರೌಢಶಾಲೆ, ಪೊನ್ನಪ್ಪಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೊನ್ನಪ್ಪಸಂತೆ ಎಂಸಿಎಸ್ ಪ್ರೌಢಶಾಲೆ, ಬೆಸಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವಿಜೇತ ಮಕ್ಕಳಿಗೆ ಬಹುಮಾನ: ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು, ಗ್ರಾಮಸ್ಥರು ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕಿಯರು ಬಹುಮಾನ ನೀಡಿದ್ದರಲ್ಲದೆ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರಿಗೆ ಹಾಗೂ ಶಿಕ್ಷಕಿಯರಿಗೆ ಸ್ಥಳೀಯ ಶಾಲಾ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ತೀರ್ಪುಗಾರರಾಗಿ ಸರಸ್ವತಿ, ಕೃಷ್ಣ, ಅಶ್ವಿನಿ, ಅಫೀಫಾ, ಸರೀನಾ, ಮೀನಾ, ಧಕ್ಷ, ರಾಧಾ, ರಸಿಕಾ ಮಾದಪ್ಪ, ಮಾಲಾ, ಅರುಣ್ ಕುಮಾರ್, ಶಿಲ್ಪಾ, ಸಹಿದಾ ಭಾನು, ವೆಂಕಟೇಶ್, ವನಿತಾ ಕುಮಾರಿ, ವನಜಾ, ಬಸವರಾಜು ಹಾಗೂ ಶಿಲ್ಪಾ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ತೀತರಮಾಡ ರಾಜ ಕರುಂಬಯ್ಯ, ದಾನಿಗಳಾದ ಪುಚ್ಚಿಮಾಡ ರಾಯ್ ಮಾದಪ್ಪ, ಶಾಂತಿ ಪೊನ್ನಮ್ಮ, ಮಾಯಮುಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸವಿತಾ ಕುಮಾರಿ, ಬಾಳಲೆ ಸಿಆರ್ಪಿ ಅರುಣ್ಕುಮಾರ್, ಕುಟ್ಟ ಸಿಆರ್ಪಿ ಆಫೀಫಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ವೆಂಕಟೇಶ್, ಎಂ.ಟಿ.ಸುಮಾ, ವಿವಿಧ ಶಾಲೆಯ ಶಿಕ್ಷಕ ವೃಂದದವರು ಶಾಲಾ ಮಕ್ಕಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಅವರು ಸ್ವಾಗತಿಸಿ, ಸಹ ಶಿಕ್ಷಕಿ ಕೆ.ಎನ್.ರಾಧಾ ವಂದಿಸಿದರು.