ಕುಶಾಲನಗರ
ಸಾರ್ವಜನಿಕರು ರಸ್ತೆ ಹಾಗೂ ಬೀದಿ ಬದಿಗಳಲ್ಲಿ ಕಸ ಚೆಲ್ಲದೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಕುಶಾಲನಗರ ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ವತಿಯಿಂದ ಶುಕ್ರವಾರ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಶ್ರಮದಾನ ಹಾಗೂ ಸ್ವಚ್ಛತಾ ಅಭಿಯಾನ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ 25 ವರ್ಷಗಳಿಂದ ಜನರ ಸೇವೆ ಮಾಡುತ್ತಾ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ದೇಶಕ್ಕೆ ಮಹಾನ್ ಶಕ್ತಿಯಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಮತ್ತು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಈ ಸ್ವಚ್ಛತಾ ಜಾಗೃತಿ ಹಮ್ಮಿಕೊಳ್ಳಲಾಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಾಂಕೇತಿಕವಾಗಿ ಕಸ ತೆಗೆಯುವ ಮೂಲಕ ಸಾರ್ವಜನಿಕರಲ್ಲಿ ನೈರ್ಮಲ್ಯದ ಅರಿವು ಮೂಡಿಸುವುದು ನಮ್ಮ ಮುಖ್ಯ ಉದ್ದೇಶ. ಕೊಡಗು ಜಿಲ್ಲೆಯ ಸುಮಾರು 60 ಗ್ರಾಮ ಪಂಚಾಯಿತಿಗಳ ಪೈಕಿ ಈಗಾಗಲೇ 40 ರಿಂದ 46 ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ವಿದೇಶಗಳಿಗೆ ತೆರಳುವ ನಮ್ಮ ಜನರು ಅಲ್ಲಿನ ರಸ್ತೆಗಳ ನೈರ್ಮಲ್ಯವನ್ನು ಹೊಗಳುತ್ತಾರೆ. ಆದರೆ ಸ್ವದೇಶಕ್ಕೆ ಮರಳಿದಾಗ ಸ್ವಚ್ಛತೆಯನ್ನು ಕಾಪಾಡಲು ಮರೆಯುತ್ತಾರೆ ಎಂದು ಹೇಳಿದರು.
ನಗರ ಬಿಜೆಪಿ ಅಧ್ಯಕ್ಷ ಚರಣ್, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಪುರಸಭೆ ಮಾಜಿ ಅಧ್ಯಕ್ಷ ಜಯವರ್ಧನ್, ಮಾಜಿ ಸದಸ್ಯ ಅಮೃತ್ ರಾಜ್ ಪಕ್ಷದ ಪ್ರಮುಖರಾದ ಗಣಿ ಪ್ರಸಾದ್, ಬೋಸ್ ಮಂದಣ್ಣ, ನಾರಾಯಣ್, ದೊರೆ ಗಣಪತಿ, ಪ್ರವೀಣ್, ಪ್ರಭಾಕರ್, ಸುಮನ್ ಗೌಡ, ಸಚಿನ್, ವೈಶಾಕ್, ಶಿವರಾಜ್, ಗೀತಾ ಧರ್ಮಪ್ಪ, ರಾಮ್ ಶೆಟ್ಟಿ, ಯಾದವ್ ರಾವ್ ಮತ್ತಿತರರು ಈ ಸಂದರ್ಭ ಇದ್ದರು.