ನೀಲಿ ಶಾಲಿನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಹಾಗೂ ಅಂಬೇಡ್ಕರ್ ವಿಚಾರಧಾರೆಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಡಿಎಸ್‌ಎಸ್ ವತಿಯಿಂದ ಮನವಿ ಸಲ್ಲಿಸಲಾಯಿತು. ಜಯಪ್ಪ ಹಾನಗಲ್, ಡಿ.ಎಸ್. ನಿರ್ವಾಣಪ್ಪ, ಮೋಹನ್ ಮೌರ್ಯ, ಲೀಲಾ ಶೇಷಮ್ಮ, ಗಾಯತ್ರಿ ನರಸಿಂಹ ಮತ್ತಿತರರು ಇದ್ದರು. 
ಕೊಡಗು

ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ಡಿಎಸ್‌ಎಸ್ ಒತ್ತಾಯ

ಮಡಿಕೇರಿ

ಮಾಜಿ ಸಂಸದ ಪ್ರತಾಪ್ ಸಿಂಹ ನೀಲಿ ಶಾಲಿನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಹಾಗೂ ಅಂಬೇಡ್ಕರ್ ವಿಚಾರಧಾರೆಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ ಎಂದು ಡಿಎಸ್‌ಎಸ್ ಹಿರಿಯ ಮುಖಂಡ ಜಯಪ್ಪ ಹಾನಗಲ್ ಹೇಳಿದರು. ಮಾಜಿ ಸಂಸದ ಪ್ರತಾಪ್ ಸಿಂಹ ದಲಿತ ಸಂಘಟನೆಗಳು ಹಾಗೂ ನೀಲಿ ಶಾಲಿನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಕೊಡಗು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಇಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.

ಅಂಬೇಡ್ಕರ್ ಬಗ್ಗೆ ಓದಿ ತಿಳಿದುಕೊಳ್ಳಿ ಎಂಬ ಪ್ರತಾಪ್ ಸಿಂಹ ಅವರ ಮಾತನ್ನು ಒಪ್ಪಬಹುದಾದರೂ, ದಲಿತರಿಗೆ ಉಪದೇಶ ನೀಡುವ ಮೊದಲು ಇಡೀ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡಲಿ. ಪ್ರಸ್ತುತ ರಾಜಕೀಯವಾಗಿ ನಿರುದ್ಯೋಗಿಯಾಗಿರುವ ಪ್ರತಾಪ್ ಸಿಂಹ ತಮ್ಮ ನಡತೆಯನ್ನು ತಿದ್ದಿಕೊಂಡು ಸಮಾಜಕ್ಕೆ ಒಳಿತು ಮಾಡಲಿ ಎಂದರು.

ದಲಿತ ಮುಖಂಡ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಪ್ರತಾಪ್ ಸಿಂಹ ರಾಜಕೀಯ ನಿರುದ್ಯೋಗಿಯಾಗಿದ್ದು, ಸಮಾಜದಲ್ಲಿ ಕಿಡಿ ಹಚ್ಚುವುದೇ ಅವರ ಕೆಲಸವಾಗಿದೆ. ಅಧಿಕಾರ ಉಳಿಸಿಕೊಳ್ಳಲು ಸಂವಿಧಾನಾತ್ಮಕ ಹಕ್ಕುಗಳನ್ನು ನಶಿಸಿ, ಗಣಪತಿ ಹಬ್ಬದಲ್ಲೂ ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನೀಲಿ ಬಾವುಟ ಬದಲಾವಣೆಯ ಸಂಕೇತ ಹಾಗೂ ಕೇಸರಿ ತ್ಯಾಗದ ಸಂಕೇತವಾಗಿದೆ. ದಲಿತರನ್ನು ಕೆಣಕಿದರೆ ಮುಂಬರುವ ಚುನಾವಣೆಯಲ್ಲಿ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರಲ್ಲದೆ ಅಟ್ರಾಸಿಟಿ ಪ್ರಕರಣಗಳಿದ್ದರೂ ಅವರನ್ನು ಏಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಮತ್ತೋರ್ವ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಜನರನ್ನು ಎತ್ತಿಕಟ್ಟಿ ರಾಜಕೀಯ ಮಾಡಲು ಬಿಡುವುದಿಲ್ಲ, ತಾಕತ್ತಿದ್ದರೆ ನೀವು ಯಾಕೆ ಶೂದ್ರರಾದಿರಿ ಎಂಬುದರ ಬಗ್ಗೆ ಮಾತನಾಡಲಿ. ಇಂತಹ ಹೇಳಿಕೆಗಳು ಮುಂದುವರಿದಲ್ಲಿ ಕೊಡಗಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಅಣಕು ಶವಯಾತ್ರೆ ನಡೆಸಲಾಗುವುದು. ಪ್ರತಾಪ್ ಸಿಂಹರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು ಪ್ರತಾಪ್ ಸಿಂಹ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಅವರನ್ನು ಕೂಡಲೇ ಬಂಧಿಸಬೇಕೆAದು ಪಟ್ಟು ಹಿಡಿದರು.

ದಲಿತ ಮುಖಂಡರಾದ ವಿನಯ್, ದಿವಾಕರ್, ಗಣೇಶ್, ಜಯೇಂದ್ರ, ಲೀಲಾ ಶೇಷಮ್ಮ, ಗಾಯತ್ರಿ ನರಸಿಂಹ ಮತ್ತಿತರರು ಇದ್ದರು.