ಪೊನ್ನಂಪೇಟೆ
ಪೊನ್ನಂಪೇಟೆ ಪಟ್ಟಣದ ವಿವಿಧ ಒಂಬತ್ತು ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ಆರಂಭವಾದ ಶೋಭಾಯಾತ್ರೆಯ ಬಳಿಕ ಶಿವ ಕಾಲೋನಿ ಸಮೀಪದ ಗೌರಿ ಕೆರೆಯಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು. ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ಸಂಜೆ 6 ಗಂಟೆಗೆ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆಯಲ್ಲಿ ಕೃಷ್ಣನಗರ, ಶಿವ ಕಾಲೋನಿ, ಮಹಾತ್ಮಗಾಂಧಿ ನಗರ, ಕಾಟ್ರಕೊಲ್ಲಿ, ಜೋಡುಬೀಟಿ, ಕುಂದ ರಸ್ತೆ, ಜನತಾ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳ ಗಣೇಶೋತ್ಸವ ಸಮಿತಿಗಳ ಮೂರ್ತಿಗಳನ್ನು ಅಲಂಕರಿಸಿದ ಮಂಟಪಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಶೋಭಾಯಾತ್ರೆ ಸಾಗಿದ ವಿವಿಧ ಬಡಾವಣೆಗಳಲ್ಲಿ ಡಿಜೆ, ವಾಲಗ ಹಾಗೂ ಬ್ಯಾಂಡ್‌ಸೆಟ್‌ಗಳ ನಾದ ಮೊಳಗಿದ್ದು, ಯುವಕ ಯುವತಿಯರು ಹಾಗೂ ಸಾರ್ವಜನಿಕರು ಸಂಭ್ರಮದಿAದ ಹೆಜ್ಜೆ ಹಾಕಿದರು. ಕೃಷ್ಣ ನಗರ, ಶಿವಕಾಲೋನಿ ಹಾಗೂ ಕಾಟ್ರಕೊಲ್ಲಿಯ ಗಣೇಶ ಮಂಟಪಗಳು ಗಮನ ಸೆಳೆದವು. ತ್ಯಾಗರಾಜ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಬಳಿಕ ಗೌರಿ ಕೆರೆಯಲ್ಲಿ ಮುಂಜಾನೆ ಮೂರ್ತಿಗಳ ವಿಸರ್ಜನೆ ನೆರವೇರಿತು. ಪೊನ್ನಂಪೇಟೆ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ದೊರೆಯದಂತಾಗಿ ಕೇವಲ ಶೋಭಾಯಾತ್ರೆಗೆ ಮಾತ್ರ ಸೀಮಿತವಾಯಿತು.
ಈ ಸಂದರ್ಭ ವಿವಿಧ ಭಾಗಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಇದ್ದರು.