ಮಡಿಕೇರಿ-ಭಾಗಮಂಡಲ-ತಲಕಾವೇರಿ ಮಾರ್ಗದಲ್ಲಿ ಸಂಚರಿಸಲಿರುವ ನೂತನ ಕೆಎಸ್‌ಆರ್‌ಟಿಸಿ ಬಸ್‌ಗೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲಾಯಿತು. ಇರಸಪ್ಪ, ಮನುಕುಮಾರ್, ರಾಮಚಂದ್ರ, ವಕೀಲ ಸುನಿಲ್ ಪತ್ರಾವೋ, ಗೌರೀಶ್ ರೈ ಮತ್ತಿತರರು ಇದ್ದರು. 
ಕೊಡಗು

ಪುಣ್ಯಕ್ಷೇತ್ರ ತಲಕಾವೇರಿಗೆ ನೂತನ ಬಸ್ ಸೇವೆ ಆರಂಭ

ಮಡಿಕೇರಿ

ಸ್ಥಳೀಯರ ಬಹುದಿನಗಳ ಬೇಡಿಕೆಯಂತೆ ಮಡಿಕೇರಿ-ಭಾಗಮಂಡಲ-ತಲಕಾವೇರಿ ಮಾರ್ಗದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ಸೇವೆ ಭಾನುವಾರದಿಂದ ಆರಂಭವಾಗಿದೆ. ಆ. 22 ರಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭಾಗಮಂಡಲಕ್ಕೆ ಭೇಟಿ ನೀಡಿದ್ದ ಸಂದರ್ಭ ಭಾಗಮಂಡಲ ಹಾಗೂ ತಲಕಾವೇರಿ ಗ್ರಾಮಸ್ಥರು ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಸೂಕ್ತ ಬಸ್ ಸೌಕರ್ಯವಿಲ್ಲದೆ ಎದುರಿಸುತ್ತಿದ್ದ ತೊಂದರೆಗಳ ಕುರಿತು ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ತಕ್ಷಣ ಸ್ಪಂದಿಸಿದ್ದ ಶಾಸಕರು, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಶಾಸಕರ ಆದೇಶದ ಬೆನ್ನಲ್ಲೇ ಸಾರಿಗೆ ಸಂಸ್ಥೆಯು ನೂತನ ಬಸ್ ಸೇವೆಯನ್ನು ಆರಂಭಿಸಿದ್ದು, ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಕೆಎಸ್‌ಆರ್‌ಟಿಸಿ ಸಂಚಾರಿ ಅಧಿಕಾರಿ ಇರಸಪ್ಪ, ಬಸ್ ಚಾಲಕ ಮನುಕುಮಾರ್, ನಿರ್ವಾಹಕ ರಾಮಚಂದ್ರ, ವಕೀಲ ಸುನಿಲ್ ಪತ್ರಾವೋ, ಪ್ರಚಾರ ಸಮಿತಿ ಅಧ್ಯಕ್ಷರಾದ ಗೌರೀಶ್ ರೈ, ತಲಕಾವೇರಿ ದೇವಾಲಯದ ಸಿಬ್ಬಂದಿವರ್ಗ ಹಾಗೂ ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.

ಈ ಬಸ್ ಬೆಳಗ್ಗೆ 06.30ಕ್ಕೆ ಮಡಿಕೇರಿಯಿಂದ ಹೊರಟು, 07:45ಕ್ಕೆ ಭಾಗಮಂಡಲ ತಲುಪಲಿದೆ. ಬೆಳಗ್ಗೆ 8ಕ್ಕೆ ಭಾಗಮಂಡಲದಿAದ ಹೊರಟು, 8.20ಕ್ಕೆ ತಲಕಾವೇರಿ ತಲುಪಲಿದೆ. ಬೆಳಗ್ಗೆ 08.30ಕ್ಕೆ ತಲಕಾವೇರಿಯಿಂದ ಹೊರಟು 9ಕ್ಕೆ ಭಾಗಮಂಡಲದಿAದ ನಾಪೋಕ್ಲು, ಮೂರ್ನಾಡು ಮಾರ್ಗವಾಗಿ 11 ಗಂಟೆಗೆ ಮಡಿಕೇರಿ ತಲುಪಲಿದೆ.

ಮಧ್ಯಾಹ್ನ 11.30ಕ್ಕೆ ಮಡಿಕೇರಿಯಿಂದ ಹೊರಟು 12.45ಕ್ಕೆ ಭಾಗಮಂಡಲ ತಲುಪಲಿದೆ. ಮಧ್ಯಾಹ್ನ 1.30ಕ್ಕೆ ಭಾಗಮಂಡಲದಿAದ ಹೊರಟು 2.45ಕ್ಕೆ ಮಡಿಕೇರಿ ತಲುಪಲಿದೆ. ಸಂಜೆ 3.30ಕ್ಕೆ ಮಡಿಕೇರಿಯಿಂದ ಹೊರಟು 4.45ಕ್ಕೆ ಭಾಗಮಂಡಲ ತಲುಪಲಿರುವ ಬಸ್ ಸಂಜೆ 5 ಗಂಟೆಗೆ ಭಾಗಮಂಡಲದಿAದ ಹೊರಟು 5.20ಕ್ಕೆ ತಲಕಾವೇರಿ ತಲುಪಲಿದೆ. ಸಂಜೆ 5.30ಕ್ಕೆ ತಲಕಾವೇರಿಯಿಂದ ಹೊರಟು, 5.50ಕ್ಕೆ ಭಾಗಮಂಡಲ ತಲುಪಿ, ಸಂಜೆ 6ಕ್ಕೆ ಭಾಗಮಂಡಲದಿAದ ಹೊರಟು ರಾತ್ರಿ 7.15ಕ್ಕೆ ಮಡಿಕೇರಿ ತಲುಪಲಿದೆ.