ನ್ಯಾಯಬೆಲೆ ಅಂಗಡಿ ಸಮಸ್ಯೆ ಪರಿಶೀಲನೆ
ಸುಂಟಿಕೊಪ್ಪ: ಅರ್ಹ ಪಡಿತರ ಚೀಟಿದಾರರು ಅ.20ರೋಳಗೆ ಇಕೆವೈಸಿ ಮಾಡಿಸಿಕೊಂಡು ಪಡಿತರ ಚೀಟಿ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಹೇಳಿದರು. ವೇವ್ ಸಂಘಟನೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ವಿಎಸ್‌ಎಸ್‌ಎನ್ ನ್ಯಾಯಬೆಲೆ ಅಂಗಡಿಗೆ ಬುಧವಾರ ಭೇಟಿ ನೀಡಿ ಅಲ್ಲಿನ ಕುಂದು ಕೊರತೆ ಸಮಸ್ಯೆಯ ಬಗ್ಗೆ ಪ್ರತ್ಯಕ್ಷ ಮಾಹಿತಿ ಪಡೆದು ಮಾತನಾಡಿದರು. ಈಗಾಗಲೇ ಇಲಾಖೆ ಸೂಚನೆ ಮೇರೆಗೆ ಗಣಕಯಂತ್ರವನ್ನು ಬದಲಾಯಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಒಫ್ ಸಿ ಕೇಬಲ್ ಅಳವಡಿಕೆ ನಂತರ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದು ಅವರು ಭರವಸೆ ನೀಡಿದರು.
ಬೇಡಿಕೆ: ಪಡಿತರದಾರರು ಬಯೋಮೆಟ್ರಿಕ್ ನೀಡಿದ ಕೂಡಲೇ ಪಡಿತರವನ್ನು ವಿತರಿಸುವಂತೆ ವ್ಯವಸ್ಥೆ ಆಗಬೇಕು. ನ್ಯಾಯಬೆಲೆ ಅಂಗಡಿಗೆ ಮತ್ತೊಬ್ಬ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಪಡಿತರ ಚೀಟಿದಾರರು ಬೇಡಿಕೆ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕಿ ಸ್ವಾತಿ, ಪಡಿತರ ಚೀಟಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಂಡವರು ಇಕೆವೈಸಿ ಮಾಡಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದುಗೊಳ್ಳುತ್ತದೆ. ಮುಂಬರುವ ದಿನಗಳಲ್ಲಿ ಸರ್ಕಾರ ನೀಡುವ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ. ಒಮ್ಮೆ ಪಡಿತರ ಚೀಟಿಯು ಅಮಾನ್ಯಗೊಂಡರೆ ಮುಂದೆ ಮತ್ತೆ ಲಭ್ಯವಾಗುವುದು ಕಷ್ಟವಾಗಬಹುದು. ಹಾಗಾಗಿ ಪಡಿತರ ಚೀಟಿಯನ್ನು ಹೊಂದಿರುವವರು ಯಾವುದೇ ನಿರ್ಲಕ್ಷ್ಯ ತೋರದೇ ನಿಗದಿತ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಇಕೆವೈಸಿ ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಇದೇ ನ್ಯಾಯಬೆಲೆ ಅಂಗಡಿಯಲ್ಲಿ 1,167 ಪಡಿತರ ಚೀಟಿದಾರರಿದ್ದಾರೆ. ಅವರಲ್ಲಿ ಕೇವಲ 405 ಚೀಟಿದಾರರು ಮಾತ್ರ ಇಕೆವೈಸಿ ಮಾಡಿಸಿಕೊಂಡಿದ್ದಾರೆ. ಉಳಿದವರು ಅಕ್ಟೋಬರ್ 20ರೊಳಗೆ ಇಕೆವೈಸಿ ಪ್ರಕ್ರಿಯೆ ಪೂರ್ಣ ಗೊಳಿಸಿಕೊಳ್ಳಬೇಕು ಎಂದವರು ಹೇಳಿದರು.
ಬೆಂಬಲ: ಸುಂಟಿಕೊಪ್ಪ ವೇವ್ ಸಂಘಟನೆಯ ಸಂಚಾಲಕ ಕೆ.ಎ.ಲತೀಫ್ ಮಾತನಾಡಿ, ಸಂಘಟನೆಯ ವತಿಯಿಂದ ಇಕೆವೈಸಿ ಪ್ರಕ್ರಿಯೆಗೆ ಬೆಂಬಲಿಸಿ ಪಡಿತರ ಚೀಟಿದಾರರಿಗೆ ಸಹಾಯ ಮಾಡುವುದಾಗಿ ಹೇಳಿದರು. ಸಂಘಟನೆಯ ಪದಾಧಿಕಾರಿಗಳಾದ ಜುಬೇರ್, ರಶೀದ್, ಮಣಿ, ದಿನೇಶ್ ಇತರರು ಇದ್ದರು.