ಗೋಣಿಕೊಪ್ಪಲು
ದೇಶದ ಸ್ವಾತಂತ್ರ‍್ಯ ಹೋರಾಟದ ಕೊಡಗಿನ ಅಧ್ಯಾಯದಲ್ಲಿ ಪಂದ್ಯAಡ ಬೆಳ್ಯಪ್ಪ ಹಾಗೂ ಸೀತಮ್ಮ ಬೆಳ್ಯಪ್ಪನವರ ಪಾತ್ರ ಅನನ್ಯ. ಅವರೂ ಸೇರಿದಂತೆ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ನಿಸ್ವಾರ್ಥ ಸೇವೆ ಇಂದಿನ ಪೀಳಿಗೆಯ ಮಾನಸದಿಂದ ಅಳಿಸಿಹೋಗಬಾರದು ಎಂದು ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.
ಗಾಂಧಿ ಜಯಂತಿ ಅಂಗವಾಗಿ ಗೋಣಿಕೊಪ್ಪಲುವಿನ ಸ್ವಾತಂತ್ರ‍್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕೊಡಗಿನ ಗಾಂಧಿ ಎಂದೇ ಖ್ಯಾತರಾದ ಪಂದ್ಯAಡ ಬೆಳ್ಯಪ್ಪ ಅವರ ಪ್ರತಿಮೆಗೆ ಪುಷ್ಪನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುಕೊ ಸಂಸ್ಥೆಯು ನೆಪ್ಪುರ ನಳತ್ ಮಾಂಜತ ಮೊಟ್ಟ್ ಎಂಬ ಪರಿಕಲ್ಪನೆಯಡಿಯಲ್ಲಿ ಕೊಡಗಿನ ಸ್ವಾತಂತ್ರ‍್ಯ ಹೋರಾಟಗಾರರನ್ನು ನಿರಂತರವಾಗಿ ಸ್ಮರಿಸುವ ಕೆಲಸ ಮಾಡುತ್ತಿದೆ. ಇದರಿಂದ ಪ್ರೇರಿತರಾದ ಶಾಸಕ ಎ.ಎಸ್. ಪೊನ್ನಣ್ಣನವರ ಕಾಳಜಿಯಿಂದ ಗೋಣಿಕೊಪ್ಪದಲ್ಲಿ ಪಂದ್ಯAಡ ಬೆಳ್ಯಪ್ಪ ಅವರ ಪ್ರತಿಮೆ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಷಯ. ಜೀವನಪರ್ಯಂತ ಗಾಂಧಿತತ್ವವನ್ನು ಅಳವಡಿಸಿಕೊಂಡು ಬದುಕಿದ ಬೆಳ್ಯಪ್ಪನವರ ಪ್ರತಿಮೆಗೆ ಗಾಂಧಿ ಜಯಂತಿಯAದು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಿರುವುದು ಅರ್ಥಪೂರ್ಣ. ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರ ಸ್ಮರಣೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಬೇಕು ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅವರಿಗೆ ಸೂಕ್ತ ಮಾನ್ಯತೆ ಸಿಗುವಂತಾಗಲು ಜನಪ್ರತಿನಿಧಿಗಳು ಶ್ರಮಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೊಡಗಿನ ಗಾಂಧಿ ಪಂದ್ಯAಡ ಬೆಳ್ಯಪ್ಪನವರ ಮೊಮ್ಮಗಳು ಹಾಗೂ ಸೋಲ್ ಫುಲ್ ಸೋಜೋರ್ನ್ ಪುಸ್ತಕದ ಲೇಖಕಿ ಬೊಮ್ಮಂಡ ಸವೇರಾ ಚಂಗಪ್ಪ ಪಂದ್ಯAಡ ಬೆಳ್ಯಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಇದೇ ವೇಳೆ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಯುಕೊ ಸದಸ್ಯರಾದ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಪ್ರತಿಮಾ ಕರುಂಬಯ್ಯ, ನೆಲ್ಲಮಕ್ಕಡ ಜಫ್ರಿ ಮಾದಯ್ಯ, ಅಜಿನಿಕಂಡ ತಿಮ್ಮಯ್ಯ, ಕಳ್ಳಿಚಂಡ ದೀನ ಉತ್ತಪ್ಪ ಮತ್ತಿತರರು ಇದ್ದರು.