ಗೋಣಿಕೊಪ್ಪ: ಕನ್ನಡ ಭಾಷೆ, ಸಂಸ್ಕೃತಿ, ನೆಲ, ನೀರು ಮತ್ತು ಮಣ್ಣನ್ನು ಉಳಿಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂದು ಹಿರಿಯ ವೈದ್ಯ ಡಾ.ಶಿವಪ್ಪ ಅಭಿಪ್ರಾಯಪಟ್ಟರು.
ಸಮಾಜ ಸೇವಾ ಸಮಿತಿಯಿಂದ ಹರಿಶ್ಚಂದ್ರಪುರದ ನಾಯ್ಡು ಮನೆ ಅಂಗಳದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡ ಭಾಷೆಗಿದೆ. ಕವಿಗಳು, ಕಲಾವಿದರು, ವಿಜ್ಞಾನಿಗಳು, ಇಂಜಿನಿಯರ್ಗಳು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅನೇಕರು ಕನ್ನಡ ನಾಡು-ನುಡಿ ಕಟ್ಟುವಲ್ಲಿ ತಮಗೆ ಅರಿವಿಲ್ಲದಂತೆಯೇ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಮಾತೃಭಾಷೆ ಬೇರೆಯಾಗಿದ್ದರೂ ನಾರಾಯಣಸ್ವಾಮಿ ನಾಯ್ಡು ಅವರು ಕನ್ನಡದ ಅಭಿಮಾನವನ್ನು ಎತ್ತಿಹಿಡಿದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಾ ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪೃಥ್ವಿ ಮಾತನಾಡಿ, ಕನ್ನಡ ಭಾಷೆ ಮಾತನಾಡುವುದೇ ಒಂದು ಸೊಗಸು. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಆ ನಿಟ್ಟಿನಲ್ಲಿ ಕನ್ನಡದ ಕಂಪನ್ನು ಪಸರಿಸುವಂತಹ ಕಾರ್ಯಕ್ರಮಗಳು ನಿರಂತರವಾಗಿ ಆಯೋಜನೆಯಾಗಬೇಕು ಎಂದರು.
ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಕಾಮತ್ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿ ಮತ್ತು ನಮ್ಮೆದೆಯ ಉಸಿರು. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ತುಕ್ ಬೊಳಕ್ ಅಕಾಡೆಮಿ ಸಂಚಾಲಕ ಮುಲ್ಲೆಂಗಡ ಮದೋಶ್ ಪೊವಯ್ಯ ಮಾತನಾಡಿ, ಕನ್ನಡ ಭಾಷೆ ಮತ್ತು ಮಣ್ಣಿನ ರಕ್ಷಣೆಗಾಗಿ ನಾವೆಲ್ಲರೂ ಈ ದಿನ ಸಂಕಲ್ಪ ಮಾಡಬೇಕಾಗಿದೆ. ಕನ್ನಡ ಭಾಷೆ ಉಳಿಯಬೇಕಾದರೆ ಅದು ನಮ್ಮ ಹೃದಯದ ಮತ್ತು ಮನಸ್ಸಿನ ಭಾಷೆಯಾಗಬೇಕು ಎಂದು ತಿಳಿಸಿದರು.
ಸಮಾಜ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಯೋಧ ರಮೇಶ್, ರಂಗ ಕಲಾವಿದ ಕೋಳೆರ ಸನ್ನು ಕಾವೇರಪ್ಪ, ಸಾಹಿತಿ ಹಾಗೂ ಪತ್ರಕರ್ತ ಜಗದೀಶ್ ಜೋಡುಬೀಟಿ, ಗೋಣಿಕೊಪ್ಪದ ಡಿ ಗ್ರೂಪ್ ನೌಕರ ನಂಜುಂಡ, ಪಂಚಾಯಿತಿ ನೌಕರ ನೌಷದ್, ನಿರುಗಂಟಿ ವಿಶ್ವ, ಅಂಗನವಾಡಿ ಕಾರ್ಯಕರ್ತೆ ಲತಾ, ನಾಡಹಬ್ಬ ಸಮಿತಿ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ, ಸಮಾಜ ಸೇವಕಿ ಕುಸುಮಾವತಿ, ಆಟೋ ಚಾಲಕಿ, ಭವ್ಯಾ, ಲಕ್ಷ್ಮೀ ಬಸ್ ಮಾಲೀಕ ಕೆ.ಕುಟ್ಟನ್, ಕಿಲ್ಲೆರಿ ಮುತ್ತಪ್ಪ ದೇವಸ್ಥಾನದ ಸ್ಥಾಪಕ ಸಂಜಿವ್, ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕೆಡಿಪಿ ಸದಸ್ಯ ಸಮ್ಮದ್, ಸಿನಿಮಾ ನಟ ಕಾಡ್ಯಮಾಡ ಸುಮಾನ್ ಹಾಗೂ ಪ್ರಮುಖರಾದ ರಾಜಶೇಖರ್, ಚಂದ್ರ, ಕಲಾವಿದ ಮುನ್ನ, ಜಾರ್ಜ್, ಅಶ್ರಫ್, ಸಮ್ಮದ್, ಮುನ್ನ, ಇತರರು ಇದ್ದರು. ನಂತರ ನಡೆದ ಹರಿಶ್ಚಂದ್ರಪುರ ಅಂಗನವಾಡಿ ಮಕ್ಕಳ ನೃತ್ಯ ಗಮನ ಸೆಳೆಯಿತು.