ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಮನ ಸೆಳೆದ ಆಕರ್ಷಕ ಪಥಸಂಚಲನ. 
ಕೊಡಗು

ನರಿಯಂದಡ, ಚೇಲಾವರ ತಂಡಗಳಿಗೆ ಚಾಂಪಿಯನ್ ಪಟ್ಟ

ಚೆಯ್ಯಂಡಾಣೆಯಲ್ಲಿ ರಾಜ್ಯೋತ್ಸವ ಅಂಗವಾಗಿ ಕ್ರೀಡಾಕೂಟ

ನಾಪೋಕ್ಲು: ಇಲ್ಲಿಗೆ ಸಮೀಪದ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟವು ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯೊಂದಿಗೆ ವರ್ಣರಂಜಿತವಾಗಿ ತೆರೆ ಕಂಡಿದೆ.

ಕಾರ್ಯಕ್ರಮದ ಆರಂಭದಲ್ಲಿ ಕ್ರೀಡಾ ಸಮಿತಿಯ ಉಪಾಧ್ಯಕ್ಷ ಚೆಯ್ಯಂಡ ನಂದನಾಚಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರೆ, ಅಧ್ಯಕ್ಷ ಚೇನಂಡ ಸಂಪತ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಸೈನಿಕ ಚೆಯ್ಯಂಡ ಶಂಕರಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ನರಿಯಂದಡ ತಂಡದ ವಿಶ್ವಪ್ರೀತ್, ಕೊಕೇರಿ ತಂಡದ ನಿವೃತ್ತ ಸೈನಿಕ ಚೇನಂಡ ಸಚಿನ್ ಹಾಗೂ ಚೇಲಾವರ ತಂಡದ ಹಾರ್ಥಿಕ್ ಕಾಳಪ್ಪ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.

ಹಗ್ಗಜಗ್ಗಾಟದಲ್ಲಿ ಚಾಂಪಿಯನ್: ತೀವ್ರ ಕುತೂಹಲ ಕೆರಳಿಸಿದ್ದ ಪುರುಷರ ಹಗ್ಗ ಜಗ್ಗಾಟದ ಫೈನಲ್ ಪಂದ್ಯದಲ್ಲಿ ಚೇಲಾವರ ತಂಡವನ್ನು ಮಣಿಸಿದ ನರಿಯಂದಡ ತಂಡ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಚೇಲಾವರ ತಂಡ ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು. ಅಂತೆಯೇ ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟದ ರೋಚಕ ಪಂದ್ಯದಲ್ಲಿ ಕೊಕೇರಿ ತಂಡವನ್ನು ಮಣಿಸಿ ಚೇಲಾವರ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೊಕೇರಿ ತಂಡ ರನ್ನರ್ಸ್ ಸ್ಥಾನ ಪಡೆಯಿತು.

ಸೌಹಾರ್ದ, ಮೌಲ್ಯ ಎತ್ತಿಹಿಡಿದ ಅತಿಥಿಗಳು: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಚೇನಂಡ ಎಂ.ಸಂಪತ್ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ಸಿಐಡಿ ಡಿಟೆಕ್ಟಿವ್ ಪೊಲೀಸ್ ಇನ್‌ಸ್ಪೆಕ್ಟರ್ ಕುಪ್ಪೋಡಂಡ ರಫೀಕ್, ಕ್ರೀಡೆಗೆ ಯಾವುದೇ ಜಾತಿ-ಧರ್ಮದ ಭೇದವಿಲ್ಲ. ಯುವಜನತೆಯ ಭವಿಷ್ಯವನ್ನು ಹಾಳು ಮಾಡುವ ಗಾಂಜಾ, ಎಂಡಿಎಂಎ, ಎಲ್‌ಎಸ್‌ಡಿ ಅಂತಹ ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಬಳಕೆ ಕಾನೂನುಬಾಹಿರ. ಯುವಜನರು ಇಂತಹ ವ್ಯಸನಗಳಿಂದ ದೂರವಿದ್ದು, ಸೌಹಾರ್ದತೆ ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.

ನಿವೃತ್ತ ಸೈನಿಕ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ಮಾತನಾಡಿ, ರಾಜ್ಯದಲ್ಲಿ ಮಾತ್ರ ಕನ್ನಡ ನಾಡಿನ ಹುಟ್ಟುಹಬ್ಬವನ್ನು ಇಷ್ಟೊಂದು ವಿಶಿಷ್ಟವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡಿಗರಿಗೆ ಕರ್ನಾಟಕವೇ ಕುರುಕ್ಷೇತ್ರ, ಭಾರತವೇ ಧರ್ಮಕ್ಷೇತ್ರ. ಈ ಮಣ್ಣಿನ ಕ್ರೀಡಾಪಟುಗಳು ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಲು ಕ್ರೀಡಾಕೂಟ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಸರ್ಕಾರದ ಅನುದಾನಕ್ಕೆ ಮನವಿ: ಅಧ್ಯಕ್ಷೀಯ ನುಡಿಗಳನ್ನಾಡಿದ ಚೇನಂಡ ಸಂಪತ್, 1981ರಲ್ಲಿ ಬಿತ್ತಿದ ಕ್ರೀಡಾಕೂಟದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. 3 ಗ್ರಾಮಗಳ ಜನರು ಒಂದಾಗಿ ನಡೆಸುವ ಇಂತಹ ಕ್ರೀಡಾಕೂಟ ರಾಜ್ಯಕ್ಕೇ ಮಾದರಿ. ಇದರ ನಿರಂತರ ಬೆಳವಣಿಗೆಗೆ ಸರ್ಕಾರದಿಂದ ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ಮಕ್ಕಿಮನೆ ಸುಧೀರ್, ನಾಟಿ ವೈದ್ಯ ಪಡಿಂಞರಮ್ಮಂಡ ನಂದಕುಮಾರ್, ಕೃಷಿಕ ಕುಮ್ಮಂಡ ಕಾವೇರಪ್ಪ, ಕ್ರೀಡಾಪಟು ಹಾಗೂ ಪೋಸ್ಟ್ ಮಾಸ್ಟರ್ ಪಟ್ಟಚೇರುವಂಡ ಜೀವನ್ ಮುದ್ದಪ್ಪ ಮತ್ತು ಚೆಯ್ಯಂಡ ಪ್ರಕಾಶ್ ಶುಭ ಹಾರೈಸಿದರು.

ಸಮಿತಿಯ ಉಪಾಧ್ಯಕ್ಷ ನಂದ ನಾಚಪ್ಪ, ಕಾರ್ಯದರ್ಶಿ ಸುನಿಲ್, ಕೋಶಾಧಿಕಾರಿ ನಮೂ ಚಿಯಣ್ಣ, ಸಂಚಾಲಕ ಹರಿಪ್ರಸಾದ್ ಹಾಗೂ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅನಂತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.