ವಿರಾಜಪೇಟೆ: ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ, ವಿರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ವಿರಾಜಪೇಟೆ ಇವರ ಸಹಯೋಗದಲ್ಲಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನಲ್ಲಿ ಬುಧವಾರ ಕಾನೂನು ಸೇವಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಿರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್, ಪ್ರತಿವರ್ಷ ನ.9 ರಂದು ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ ಜಾರಿಗೆ ಬಂದ ದಿನವನ್ನು ಕಾನೂನು ಸೇವೆಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಹಣದ ಸಮಸ್ಯೆಯಿಂದ ಜನರು ನ್ಯಾಯದಿಂದ ವಂಚಿತರಾಗಕೂಡದು ಮತ್ತು ಉಚಿತ ಕಾನೂನಿನ ನೆರವು ದೇಶದ ಕಟ್ಟಕಡೆಯ ಪ್ರಜೆಗೂ ತಲುಪಬೇಕು. ಹಾಗೆಯೇ ಇದು ರಾಜ್ಯನೀತಿ ನಿರ್ದೇಶಕ ತತ್ವದ ಅಡಿಯಲ್ಲಿ ಸಂವಿಧಾನದ ಅನುಚ್ಛೇದ 39ಂ ಅಡಿಯಲ್ಲಿ ಸಂವಿಧಾನವು ಅಸಹಾಯಕರು, ದುರ್ಬಲರಿಗೆ ಉಚಿತವಾಗಿ ಕಾನೂನು ಸೇವೆಯನ್ನು ಒದಗಿಸಬೇಕೆಂದು ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಉಚಿತ ಕಾನೂನು ಸೇವೆಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಪೂವಣ್ಣ, ಹಿರಿಯ ವಕೀಲರಾದ ಬಿ.ಎನ್.ತಿಮ್ಮಯ್ಯ ಕಾಲೇಜಿನ ಪ್ರಾಂಶುಪಾಲರಾದ ವಿನೀತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
ಚಿತ್ರ ಅಳವಡಿಸಲಾಗಿದೆ.