ಕಸ ಸಂಗ್ರಹ ಸಂಬAಧ ಮಡಿಕೇರಿ ನಗರಸಭೆ ನಿಯಮಗಳನ್ನು ರೂಪಿಸಿದರೂ ಅಲ್ಲಲ್ಲಿ ಕಸ ಎಸೆಯುವ ಚಾಳಿಗೆ ಕಡಿವಾಣ ಬಿದ್ದಿಲ್ಲ. 
ಕೊಡಗು

ತ್ಯಾಜ್ಯ ಸಮಸ್ಯೆಗೆ ಮೂಲದಲ್ಲೇ ವಿಂಗಡಣೆ ಪರಿಹಾರ

ಮಡಿಕೇರಿ

ತಂಪು ಹವಾಮಾನ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಮಡಿಕೇರಿ ನಗರವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಕಸ ವಿಲೇವಾರಿ ಕೂಡ ಒಂದು. ಪ್ರತಿದಿನ ನಗರದಲ್ಲಿ ಉತ್ಪತ್ತಿಯಾಗುವ ಟನ್‌ಗಟ್ಟಲೆ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ನಗರಸಭೆಗೆ ಕಠಿಣ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಹಂತದಲ್ಲೇ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ನಗರಸಭೆಯ ಈ ನಿರ್ಧಾರದಿಂದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆಯೇ ಎಂಬ ಚರ್ಚೆ ಆರಂಭವಾಗಿದೆ.

ಮೂಲದಲ್ಲೇ ತ್ಯಾಜ್ಯ ವಿಂಗಡಣೆಯಾದರೆ ಹಸಿ ಕಸದಿಂದ ಗೊಬ್ಬರ ತಯಾರಿಕೆ ಹಾಗೂ ಒಣ ಕಸದಿಂದ ಮರುಬಳಕೆ ಪ್ರಕ್ರಿಯೆ ಸುಲಭವಾಗುತ್ತದೆ. ಇದರಿಂದ ಡಂಪಿAಗ್ ಯಾರ್ಡ್ ತಲುಪುವ ಕಸದ ಪ್ರಮಾಣ ಶೇ. 60 ರಷ್ಟು ಕಡಿಮೆಯಾಗಲಿದೆ. ಮಿಶ್ರಿತ ಕಸ ಕೊಳೆತು ವಾತಾವರಣ ಕಲುಷಿತಗೊಳ್ಳುವುದು, ನೊಣ-ಸಾಕುಪ್ರಾಣಿಗಳ ಹಾವಳಿ ಹಾಗೂ ದುರ್ನಾತದಿಂದ ಸ್ಥಳೀಯರಿಗೆ ಮುಕ್ತಿ ಸಿಗಲಿದೆ. ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡುವುದರಿಂದ ನಗರಸಭೆಯ ಸಾರಿಗೆ ಮತ್ತು ವಿಲೇವಾರಿ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದ್ದು, ಆ ಹಣವನ್ನು ನಗರದ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು. ಆದರೆ ಕಡ್ಡಾಯ ನಿಯಮ ರೂಪಿಸಿದರೂ, ಸಾರ್ವಜನಿಕರು ಮನೆಯಲ್ಲೇ ಕಸ ವಿಂಗಡಿಸಿ ನೀಡುವ ಅಭ್ಯಾಸ ರೂಢಿಸಿಕೊಳ್ಳುವುದು ತಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಾಗೃತಿಯ ಅಭಿಯಾನ ನಿರಂತರವಾಗಿ ನಡೆಯಬೇಕಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಮಡಿಕೇರಿ ಪ್ರವಾಸಿ ತಾಣವಾಗಿರುವುದರಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಾರೆ. ಹೋಟೆಲ್, ರೆಸ್ಟೋರೆಂಟ್ ಮತ್ತು ರಸ್ತೆ ಬದಿಗಳಲ್ಲಿ ಪ್ರವಾಸಿಗರು ಚೆಲ್ಲುವ ಕಸದ ವಿಂಗಡಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಅಥವಾ ಕಸ ಸ್ವೀಕರಿಸದಿರುವ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಗರಸಭೆ ಹಿಂಜರಿಯುವುದು ಕೂಡ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತ್ತಿದೆ ಎನ್ನಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕನೂ ಕಸ ವಿಂಗಡಣೆಯನ್ನು ತನ್ನ ಕರ್ತವ್ಯವೆಂದು ಭಾವಿಸಿ ಕಸ ವಿಂಗಡಿಸಿ ನೀಡಿದಾಗ ಮಾತ್ರ ಮಡಿಕೇರಿ ನಗರವನ್ನು ನಿಜವಾದ ಅರ್ಥದಲ್ಲಿ ಸ್ವಚ್ಛ ಮಡಿಕೇರಿಯನ್ನಾಗಿ ಮಾಡಲು ಸಾಧ್ಯ.

ಮಡಿಕೇರಿಯಂಥ ಚಿಕ್ಕ ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಹೆಚ್ಚು ವಿಸ್ತಾರದ ಜಾಗ ಸಿಗುವುದು ಕಷ್ಟ. ಇದನ್ನು ನಗರದ ನಿವಾಸಿಗಳಾದ ನಾವುಗಳು ಅರ್ಥ ಮಾಡಿಕೊಂಡು ನಗರಸಭೆ ರೂಪಿಸಿರುವ ನಿಯಮಗಳಿಗೆ ಸ್ಪಂದಿಸಬೇಕು. ನಗರದ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ನಗರಸಭೆಯಷ್ಟೇ ಜವಾಬ್ದಾರಿ ನಮ್ಮ ಮೇಲೆಯೂ ಇದೆ. ಹಾಗಾಗಿ ಒಣಕಸ, ಹಸಿ ಕಸ ವಿಲೇವಾರಿಯ ನಿಗದಿತ ವಾರದಂದು ಅವುಗಳನ್ನು ಕಸ ಸಂಗ್ರಹಿಸುವ ವಾಹನಗಳಿಗೆ ಕೊಡಬೇಕು. ಕಸ ಸಂಗ್ರಹಿಸುವವರನ್ನು ಗೌರವದಿಂದ ಕಾಣಬೇಕು.

ಚೊಕ್ಕಾಡಿ ಪ್ರೇಮರಾಘವಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ

ಮಡಿಕೇರಿಯಲ್ಲಿ ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಕ್ರಮ. ಕಸ ವಿಲೇವಾರಿ ಸಮಸ್ಯೆಗೆ ಇದು ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಬಹುದು. ಆದರೆ ನಿಯಮ ಜಾರಿಗೊಳಿಸುವುದರೊಂದಿಗೆ ನಾಗರಿಕರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅಗತ್ಯ. ಮನೆಮನೆಯಿಂದ ಸಮರ್ಪಕವಾಗಿ ಕಸ ಸಂಗ್ರಹಿಸುವ ವ್ಯವಸ್ಥೆ, ಹಸಿ ಹಾಗೂ ಒಣತ್ಯಾಜ್ಯಕ್ಕೆ ಪ್ರತ್ಯೇಕ ಸಾಗಣೆ ಮತ್ತು ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಕಲ್ಪಿಸಬೇಕು. ವಿಂಗಡಿಸಿದ ಕಸವನ್ನು ಮತ್ತೆ ಒಟ್ಟಿಗೆ ಸೇರಿಸುವಂತಾಗಬಾರದು. ನಗರಸಭೆ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜತೆಗೆ, ನಾಗರಿಕರೂ ನಿಯಮ ಪಾಲಿಸಿ ಸಹಕರಿಸಿದಾಗ ಮಾತ್ರ ಈ ವ್ಯವಸ್ಥೆ ಯಶಸ್ವಿಯಾಗಲಿದೆ.

ಪ್ರತಿಮಾ ಹರೀಶ್ ರೈ, ಲೇಖಕಿ, ಮಡಿಕೇರಿ

ಕಸ ಮತ್ತು ಕಸದ ನಿರ್ವಹಣೆ ನಿಜಕ್ಕೂ ಒಂದು ಸಮಸ್ಯೆಯೇ. ತ್ಯಾಜ್ಯ ವಿಂಗಡಣೆ ಬಗ್ಗೆ ಜನರಲ್ಲಿ ಇನ್ನೂ ಅರಿವಿನ ಕೊರತೆಯಿದೆ. ಆದಷ್ಟು ಕಡಿಮೆ ಕಸ ನಾನು ಗಾಡಿಗೆ ಇಂದು ಹಾಕಿದೆ ಎಂದು ಹೆಮ್ಮೆಯಿಂದ ಹೇಳುವಂತಾಗಬೇಕು. ರೆಡ್ಯೂಸ್, ರಿಯೂಸ್, ರಿಸೈಕಲ್, ರೆಫ್ಯೂಸ್ ಎಂಬ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೆ ಒಳ್ಳೆಯದು. ಕಸದ ಗಾಡಿಗೆ ತ್ಯಾಜ್ಯವನ್ನು ಹೇಗೆ ಹಾಕಬೇಕು ಎಂಬ ಅರಿವಿರಬೇಕು. ಪ್ರವಾಸಿಗರಿಗೆ ತಿಳಿ ಹೇಳಬೇಕು. ತಪ್ಪಿದಲ್ಲಿ ದಂಡ ವಿಧಿಸಬೇಕು. ತನ್ನ ಅಂಗಡಿಯ ಸುತ್ತಮುತ್ತಲು ಶುಚಿತ್ವ ಕಾಪಾಡುವುದು ಮತ್ತು ಕಸದ ನಿರ್ವಹಣೆಯತ್ತ ಕಿಂಚಿತ್ ಗಮನ ನೀಡಬೇಕು.

ಗೀತಾ ಗಿರೀಶ್, ಆರ್ಥಿಕ ಮತ್ತು ವಿಮಾ ಸಲಹೆಗಾರರು, ಮಡಿಕೇರಿ

ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಅತ್ಯಂತ ಪರಿಣಾಮಕಾರಿ ಕ್ರಮ. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ಮೂಲಕ ಪ್ರತಿಯೊಂದು ಮನೆಗೆ ತೆರಳಿ ಎರಡು ಬಕೆಟ್ ಪದ್ಧತಿಯಲ್ಲಿ ಕಸ ವಿಂಗಡಿಸುವAತೆ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು. ಸ್ವಚ್ಛ ಮತ್ತು ಸುಂದರ ಕೊಡಗಿಗಾಗಿ ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಸ್ವಲ್ಪ ಕಠಿಣ ಕ್ರಮಗಳನ್ನೂ ಅನುಸರಿಸಬೇಕಾದ ಅಗತ್ಯವಿದೆ. ಮಡಿಕೇರಿ ನಗರಸಭೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಾರ್ವಜನಿಕರೂ ಸಹಕರಿಸುವ ಮೂಲಕ ಸುಂದರ ಮಡಿಕೇರಿಗಾಗಾಗಿ ಎಲ್ಲರೂ ಕೈ ಜೋಡಿಸೋಣ

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ