ಕುಶಾಲನಗರ
ಉತ್ತರ ಕೊಡಗಿನ ಕುಶಾಲನಗರ ತಾಲೂಕು ತೊರೆನೂರು ಗ್ರಾಮದ ಹಾರಂಗಿ ನೀರಾವರಿ ವ್ಯಾಪ್ತಿಯ ಚಿಕ್ಕನಾಯಕನಹೊಸಳ್ಳಿ ಹಾಗೂ ಸುತ್ತಮುತ್ತಲ ಕೃಷಿ ಭೂಮಿಯಲ್ಲಿ ಗಂಡು ಹುಲಿಯೊಂದು ಬೀಡುಬಿಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತೊರೆನೂರು ಕಂದಾಯ ಗ್ರಾಮದ ವಿರಕ್ತ ಮಠ, ಸರ್ಕಾರಿ ಪ್ರೌಢಶಾಲೆಯ ಸಮೀಪದ ಬನ ಹಾಗೂ ಕೊಲ್ಲಿ ಪ್ರದೇಶ ಸೇರಿದಂತೆ ಚಿಕ್ಕನಾಯಕನಹೊಸಳ್ಳಿ ವ್ಯಾಪ್ತಿಯ ಹೊಲ-ಗದ್ದೆಗಳಲ್ಲಿ ಅಂದಾಜು 15 ವರ್ಷ ವಯಸ್ಸಿನ ಗಂಡು ಹುಲಿ ಸಂಚರಿಸಿರುವ ಕುರಿತು ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
ಕಳೆದ 5-6 ದಿನಗಳಿಂದ ಈ ಭಾಗದಲ್ಲಿ ಹುಲಿಯ ಚಲನವಲನ ಕಂಡುಬAದಿದ್ದು, ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ದೂರಿಗೆ ತಕ್ಷಣ ಸ್ಪಂದಿಸಿರುವ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಮಲ್ಲೇಶ್, ಆರ್.ಎಫ್.ಓ. ರೇಣುಕುಮಾರ್ ನೇತೃತ್ವದ ರ‍್ಯಾಪಿಡ್ ರೆಸ್ಪಾನ್ಸ್ ತಂಡವನ್ನು ಸ್ಥಳಕ್ಕೆ ರವಾನಿಸಿದ್ದಾರೆ.
ಮಡಿಕೇರಿ ವಿಭಾಗದ ಡಿಸಿಎಫ್ ಅಭಿಷೇಕ್ ಸೂಚನೆಯಂತೆ ಅರಣ್ಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಹಗಲು-ರಾತ್ರಿ ನಿರಂತರ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಹುಲಿ ಇಷ್ಟರವರೆಗೆ ನೇರವಾಗಿ ಪ್ರತ್ಯಕ್ಷವಾಗಿಲ್ಲ. ಈ ಹಿನ್ನೆಲೆಯಲ್ಲಿ ಹುಲಿ ಸಂಚಾರವನ್ನು ನಿಖರವಾಗಿ ಪತ್ತೆಹಚ್ಚಲು ಗುರುವಾರ ಸಂಜೆ ಚಿಕ್ಕನಾಯಕನಹೊಸಳ್ಳಿ ಬಳಿ 4 ಕ್ಯಾಮರಾ ಟ್ರ‍್ಯಾಪ್‌ಗಳನ್ನು ಅಳವಡಿಸಲಾಗಿದೆ.
ಈ ಪ್ರದೇಶದಲ್ಲಿ ರೈತರು ಭತ್ತ, ಶುಂಠಿ, ಕೆಸವಿನ ಗೆಡ್ಡೆ, ಅಡಿಕೆ, ಬಾಳೆ ಹಾಗೂ ಮೆಕ್ಕೆಜೋಳ ಬೆಳೆಗಳನ್ನು ಬೆಳೆದಿದ್ದು, ತೋಟಗಳಿಗೆ ನೀರು ಹಾಯಿಸಲು ಮತ್ತು ದಿನನಿತ್ಯದ ಕೃಷಿ ಕೆಲಸಗಳಿಗೆ ತೆರಳಲು ಭಯಪಡುತ್ತಿದ್ದಾರೆ ಎಂದು ತೊರೆನೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಕೆ. ವಸಂತ ಕಳವಳ ವ್ಯಕ್ತಪಡಿಸಿದ್ದಾರೆ. ನಾಗರಹೊಳೆ ಅಭಯಾರಣ್ಯದಿಂದ ತಪ್ಪಿಸಿಕೊಂಡು ಬಂದಿರಬಹುದಾದ ಈ ಒಂಟಿ ಗಂಡು ಹುಲಿ ದಟ್ಟವಾಗಿ ಬೆಳೆದಿರುವ ಬೆಳೆಗಳ ನಡುವೆ ಅಡಗಿಕೊಂಡಿರಬಹುದು ಅಥವಾ ನಿಡ್ತ ಮೀಸಲು ಅರಣ್ಯ, ಹೆಬ್ಬಾಲೆ, ಹಳೇಕೋಟೆ, ಚಿನ್ನೇನಹಳ್ಳಿ, ಅರಕಲಗೂಡು ತಾಲೂಕಿನ ಅರಗಲ್ಲು ವ್ಯಾಪ್ತಿಯ ಕುರುಚಲು ಕಾಡಿನತ್ತ ತೆರಳಿರಬಹುದು ಎಂದು ಶಂಕಿಸಲಾಗಿದೆ.
ರೈತರ ಜಮೀನಿನಲ್ಲಿ ಹುಲಿ ಅಡಗಿದ್ದರೆ ಅಪಾಯ ಸಂಭವಿಸುವ ಮುನ್ನವೇ ಅದನ್ನು ಕಾಡಿಗೆ ಅಟ್ಟಲು ಅಥವಾ ಬೋನು ಇಟ್ಟು ಸೆರೆ ಹಿಡಿಯಲು ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.