ಸುಂಟಿಕೊಪ್ಪ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಮೂಲಕ ಚಾಲನೆ ನೀಡಿದರು. sunti 1
ಕೊಡಗು

ಜನರ ಸಮಸ್ಯೆ ಪರಿಹರಿಸಿ

ಶಾಸಕ ಡಾ.ಮಂತರ್‌ಗೌಡ ಹೇಳಿಕೆ

ಸುಂಟಿಕೊಪ್ಪ: ಪ್ರಜಾ ಸೇವೆ ಅಭಿಯಾನದಲ್ಲಿ ಕೇವಲ ಅರ್ಜಿಗಳನ್ನು ಮಾತ್ರ ತೆಗೆದುಕೊಳ್ಳದೆ ಅರ್ಜಿಗಳಲ್ಲಿರುವ ಸಮಸ್ಯೆ ಮತ್ತು ಬೇಡಿಕೆಗಳಿಗೆ ಕಾಲಮಿತಿಯೊಳಗೆ ಪರಿಹಾರವನ್ನು ಕಲ್ಪಿಸುವುದೇ ಅಧಿಕಾರಿಗಳ ಗುರಿಯಾಗಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.

ಕೊಡಗರಹಳ್ಳಿ ಗ್ರಾಮದ ನೇತಾಜಿ ಸಮುದಾಯ ಭವನದಲ್ಲಿ ಶನಿವಾರ ಸುಂಟಿಕೊಪ್ಪ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸುಂಟಿಕೊಪ್ಪ ಹೋಬಳಿಯ 8 ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು. ಜನರ ಬಳಿಗೆ ಸರ್ಕಾರ ಹೋಗಬೇಕೆಂಬುದು ರಾಜ್ಯದ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಶಯ ಸಾಕಾರಗೊಂಡಿದೆ. ಇಂದಿನ ಸಭೆಯಲ್ಲಿ 60ರಿಂದ 70ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆ, ಅರಣ್ಯ ಇಲಾಖೆ, ರಸ್ತೆ ಸಮಸ್ಯೆ, ಶಿಕ್ಷಣ, ಆರೋಗ್ಯ, ಸೂರು ಸೇರಿದಂತೆ ಹಲವು ಬೇಡಿಕೆಗಳ ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲವನ್ನೂ ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ 5 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು, ಕುಡಿಯುವ ನೀರಿನ ಪೂರೈಕೆ ಕುರಿತು ತಹಸೀಲ್ದಾರ್ ನೇತೃತ್ವದಲ್ಲಿ ಕ್ಷೀಪ್ರ ಕಾಯಪಡೆ ತಂಡ ರಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್‌ಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲಿಯೂ ಕೂಡ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕೊಳವೆ ಬಾವಿ ಅಥವಾ ಬೇರೆ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಮಂತರ್‌ಗೌಡ ಅವರು ಸರತಿ ಪ್ರಕಾರ ಅರ್ಜಿದಾರರನ್ನು ಕರೆದು ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮೇಲಧಿಕಾರಿಗಳ ಸಹಕಾರದೊಂದಿಗೆ ಅಹವಾಲು ಆಲಿಸಿದರು. ಸಾಕಷ್ಟು ನೊಂದ ವಯೋವೃದ್ಧರು ಸರ್ಕಾರದಿಂದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಂದ ಪಲಾನುಭವಿಗಳ ಪಟ್ಟಿ ತಾಂತ್ರಿಕ ಲೋಪದೋಷ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರ ಬಳಿ ತಮ್ಮ ಅಳಲು ತೋಡಿಕೊಂಡರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣಾ ಶಿಬಿರ ಅಯೋಜಿಸಲಾಗಿತ್ತು.

ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ನೀತಿನ್ ಚೆಕ್ತಿ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಕುಶಾಲನಗರ ತಾಲೂಕು ಪ್ರಭಾರ ತಹಸೀಲ್ದಾರ್ ಕೃಷ್ಣ ಮೂರ್ತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಅಪ್ಪಣ್ಣ, ಸಹಾಯಕ ಅರಣ್ಯಾ ಸಂರಕ್ಷಾಣಾಧಿಕಾರಿ ನವೀನ್ ಕುಮಾರ್, ಆರ್‌ಎಫ್‌ಒ ರಕ್ಷಿತ್, ಸುಂಟಿಕೊಪ್ಪ ಗ್ರಾಪಂ ಪಿಡಿಒ ವಿ.ಜಿ.ಲೋಕೇಶ್, ಕೊಡಗರಹಳ್ಳಿ ಗ್ರಾಪಂ ಪಿಡಿಒ ರವೀಶ್ ಸೇರಿದಂತೆ 16 ಗ್ರಾಪಂ ಪಿಡಿಒಗಳು ಇದ್ದರು.