ಮಡಿಕೇರಿ
ಮಾನವೀಯತೆಯ ನೆಲೆಯಾದ ಸಾಹಿತ್ಯದಿಂದ ಮಾತ್ರ ಬೇರೆ ಬೇರೆ ಭಾಷೆ, ಧರ್ಮ, ಜನಾಂಗವನ್ನು ಒಂದೇ ಸರಳ ರೇಖೆಯಲ್ಲಿ ನಿಲ್ಲಿಸುವುದಕ್ಕೆ
ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರೊಫೆಸರ್ ಡಾ. ಎನ್.ಕೆ. ಲೋಲಾಕ್ಷಿ ಹೇಳಿದರು.
ಮಡಿಕೇರಿ ನಗರ ದಸರಾ ಸಮಿತಿ, ಬಹುಭಾಷಾ ಕವಿಗೋಷ್ಠಿ ಸಮಿತಿ - 2026ರ ವತಿಯಿಂದ ಮಡಿಕೇರಿ ಗಾಂಧಿ ಮೈದಾನ ಕಲಾಸಂಭ್ರಮ ವೇದಿಕೆಯಲ್ಲಿ ಗುರುವಾರ ನಡೆದ ಬಹುಭಾಷಾ ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ನಮ್ಮ ದೇಶದಲ್ಲಿ ವೈವಿಧ್ಯತೆ ಇದ್ದರೂ ಏಕತೆ ಇದೆ. ಭಾರತ ಎಂದರೆ ಸರ್ವ ಜನಾಂಗದ ಶಾಂತಿಯ ತೋಟ ಇದ್ದಂತೆ. ಒಂದು ತೋಟದಲ್ಲಿ ವಿವಿಧ ಬಣ್ಣದ ಹೂವುಗಳು, ಗಿಡಮರಗಳಿದ್ದರೂ ಎಲ್ಲದರ ಉದ್ದೇಶ ಮಾನವನ ಸಾಕ್ಷಾತ್ಕಾರವೇ ಆಗಿದೆ. ಭಿನ್ನ ಧರ್ಮ, ಜಾತಿ, ಲಿಂಗ, ಭಾಷೆಯ ಜನರು ಕವಿಗೋಷ್ಠಿಯಲ್ಲಿ ಇದ್ದರೂ ಎಲ್ಲರ ಗುರಿ ಮಾನವನ ಉದ್ಧಾರ ಹಾಗೂ ಶಾಂತಿಯುತ, ಸೌಹಾರ್ದ ಸಮುದಾಯದ ನಿರ್ಮಾಣವೇ ಆಗಿದೆ.
ಕೊಡಗಿನಲ್ಲಿ ಭಾರತೀಸುತ, ಕವಿತಾ ರೈ, ಬಿ. ಎಂ. ಹನೀಫ್, ಸತೀಶ್ ಕಾಜೂರು ಮುಂತಾದವರ ಕವಿತೆಗಳು ಈ ಮಣ್ಣಿನಲ್ಲಿ ಆಳವಾಗಿ ಬೇರೂರಿರುವ ಕಾವ್ಯದ ಶಕ್ತಿಯ ಪ್ರತಿಬಿಂಬವಾಗಿದೆ. ಮಡಿಕೇರಿಯ ಮಂಜು ಹೇಗೆ ತಂಪಾಗಿಸುತ್ತದೆಯೋ, ಹಾಗೆಯೇ ಸಾಹಿತ್ಯ ಮತ್ತು ಕಾವ್ಯವು ಕಲುಷಿತಗೊಂಡ ಮನಸ್ಸನ್ನು ತಿಳಿಗೊಳಿಸುತ್ತದೆ. ಬಹುಭಾಷಾ ಕವಿಗೋಷ್ಠಿ ಸಮಾಜದಲ್ಲಿ ಮಾನವೀಯತೆ ಹಾಗೂ ಶಾಂತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕವಿಗೋಷ್ಠಿ ಉದ್ಘಾಟಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್ ಮಾತನಾಡಿ, ಕೊಡಗು ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತವಾಗದೆ, ವಿವಿಧ ಭಾಷೆ, ಸಂಸ್ಕೃತಿ ಮತ್ತು ವೈವಿಧ್ಯಮಯ ಚಿಂತನೆಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿನ ವಿಶಿಷ್ಟ ಸಂಸ್ಕೃತಿ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಹೊರತರುವಲ್ಲಿ ಬಹಭಾಷಾ ಕವಿಗೋಷ್ಠಿ ಅತ್ಯಂತ ಮಹತ್ವದ ವೇದಿಕೆಯಾಗಿದೆ.
ಸಾಹಿತ್ಯದ ವಿವಿಧ ಪ್ರಕಾರಗಳು ಹಾಗೂ ಕಾಲಘಟ್ಟಗಳನ್ನು ಗಮನಿಸಿದಾಗ, ಇಂದಿನ ಡಿಜಿಟಲ್ ಹಾಗೂ ಎಐ ಕಾಲಘಟ್ಟದಲ್ಲೂ ಯುವ ಪೀಳಿಗೆ ಮತ್ತು ಹಿರಿಯರು ಒಂದೆಡೆ ಸೇರಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಅತ್ಯಂತ ಶ್ಲಾಘನೀಯ. ಕುವೆಂಪು, ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿ, ಬಿ.ಆರ್. ಲಕ್ಷ್ಮಣರಾವ್ ಅವರಂತಹ ದೈತ್ಯ ಸಾಹಿತಿಗಳ ಮಟ್ಟಕ್ಕೆ ತಕ್ಷಣವೇ ಕವಿತೆ ರಚಿಸಲು ಸಾಧ್ಯವಾಗದಿದ್ದರೂ, ಸ್ಥಳೀಯ ಮಟ್ಟದಲ್ಲಿ ತಮ್ಮ ಜ್ಞಾನಕ್ಕೆ ತಕ್ಕಂತೆ ಸಾಹಿತ್ಯ ಕೃಷಿ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.
ಹಿಂದಿನ ಕಾಲದಲ್ಲಿ ಕುವೆಂಪು ಅವರಂಥ ಮಹಾನ್ ಕವಿಗಳು ತಮ್ಮ ಕಾವ್ಯನಾಮಗಳ ಮೂಲಕವೇ ಚಿರಪರಿಚಿತರಾಗಿದ್ದರು. ಆದರೆ ಇಂದಿನ ಯುವ ಕವಿಗಳು ಕಾವ್ಯನಾಮಗಳನ್ನು ಬಳಸುತ್ತಿದ್ದಾರೋ ಅಥವಾ ಸ್ವಂತ ಹೆಸರಿನಲ್ಲೇ ಬರೆಯುತ್ತಿದ್ದಾರೋ ಎಂಬ ವ್ಯತ್ಯಾಸಗಳು ಇಂದಿನ ಕಾಲಘಟ್ಟದಲ್ಲಿ ತಿಳಿಯದಾಗುತ್ತಿದೆ. ಕೊಡಗಿನ ಸಾಂಸ್ಕೃತಿಕ ಬೇರುಗಳು ಮತ್ತು ಭಾಷಾ ವೈವಿಧ್ಯತೆಯು ಮುಂದಿನ ಪೀಳಿಗೆಗೆ ಸರಿಯಾಗಿ ವರ್ಗಾವಣೆಯಾಗಬೇಕಾದರೆ ಅದು ಸಾಹಿತಿ ಹಾಗೂ ಕವಿಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮಡಿಕೇರಿ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಮಡಿಕೇರಿ ದಸರಾ ಹಬ್ಬವು ತನ್ನದೇ ಆದ ವಿಶಿಷ್ಟ ಇತಿಹಾಸ, ಪರಂಪರೆ ಮತ್ತು ವೈಭವವನ್ನು ಹೊಂದಿದೆ. ಮಂಟಪಗಳ ವೈಭವ, ದಸರಾ ಮಂಟಪಗಳ ಸಂಭ್ರಮ, ಜನರ ಉತ್ಸಾಹ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಕ್ತಿಭಾವ ಇವೆಲ್ಲವೂ ಮಡಿಕೇರಿ ದಸರಾದ ಪ್ರಮುಖ ವಿಶೇಷತೆಗಳಾಗಿವೆ. ಕೆಲವು ವರ್ಷಗಳ ಹಿಂದೆ ಕೇವಲ 13 ಸಾವಿರ ರೂ. ವೆಚ್ಚದಲ್ಲಿ ದಸರಾ ಮುಗಿಯುತ್ತಿತ್ತು. ಆದರೂ ಜನಾಕರ್ಷಣೆ ಪಡೆದುಕೊಂಡಿತ್ತು. ಸಂಭ್ರಮದಿAದ ನಡೆಯುತ್ತಿತ್ತು. ಸರ್ಕಾರ ಆರಂಭದಲ್ಲಿ ಮಡಿಕೇರಿ ದಸರಾಕ್ಕೆ 10 ಲಕ್ಷ ರೂ. ಅನುದಾನ ನೀಡಿತ್ತು. ಈ ವರ್ಷ 2 ಕೋಟಿ ರೂ.ಗೆ ತಲುಪಿದೆ. ಮುಂದೆ ಮಡಿಕೇರಿ ದಸರಾಕ್ಕೆ ಬಜೆಟ್ನಲ್ಲೇ ಅನುದಾನ ಘೋಷಣೆ ಆಗುವಂತೆ ಆಗಬೇಕು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕವಿಗಳಲ್ಲಿ ಇರುವ ಜೀವನೋತ್ಸಾಹ ಎಲ್ಲರಿಗೂ ಮಾದರಿ. ಕವನಗಳನ್ನು ಸೃಷ್ಟಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಅಧ್ಯಯನವೂ ಆಗತ್ಯ ಎಂದು ಹೇಳಿದರು.
ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ಜಲ್ ರಂಜಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ರೆಡ್ ಕ್ರಾಸ್ ಕೊಡಗು ಘಟಕ ಸಭಾಪತಿ ಬಿ.ಕೆ. ರವೀಂದ್ರ ರೈ, ಕೊಡಗು ವೈದ್ಯಕೀಯ ಕಾಲೇಜು ನಿವೃತ್ತ ಮುಖ್ಯ ಆಡಳಿತಾಧಿಕಾರಿ ಬಿದ್ದಾಂಡ ಮೇರಿ ನಾಣಯ್ಯ, ಮೈಸೂರು ಲಕ್ಷ್ಮೀಪುರಂ ಸರ್ಕಾರಿ ಪ್ರೌಢ ಶಾಲೆ ಕನ್ನಡ ಶಿಕ್ಷಕಿ ಕೆ.ಎಲ್. ರೋಹಿಣಿ ಮಾತನಾಡಿದರು. ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಕಾರ್ಯಾಧ್ಯಕ್ಷ ಜಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬೀತಾ, ಕವಿಗೋಷ್ಠಿ ಸಮಿತಿ ಕಾರ್ಯದರ್ಶಿ ರಂಜಿತ್ ಕವಲಪಾರ ಮತ್ತಿತರರು ಇದ್ದರು.