ಸೋಮವಾರಪೇಟೆ: ರಾಜ್ಯ ಸರ್ಕಾರದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸ್ಪಂದಿಸುತ್ತಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ವಿಶೇಷ ನಿಧಿಯ ಯೋಜನೆಯಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 1.5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ಫಲಾನುಭವಿಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.
ಮಡಿಕೇರಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುವುದರೊಂದಿಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನೂ ಬಿಡುಗಡೆ
ಮಾಡುತ್ತಿದೆ ಎಂದರು. ಅಭಿವೃದ್ಧಿಯಲ್ಲಿ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ರಾಜಕೀಯ ದುರುದ್ದೇಶದಿಂದ ಸೌಲಭ್ಯಗಳನ್ನು ತೆಗೆದು ಹಾಕಲು ಪ್ರಯತ್ನ ಮುಂದುವರಿಸಿದರೆ ಬಿಜೆಪಿಗೆ ಫಲಾನುಭವಿಗಳೇ ಬುದ್ದಿ ಕಲಿಸಲಿದ್ದಾರೆಂದರು.
ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಅವರಣದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸದ್ಯದಲ್ಲೇ ಭೂಮಿ ಪೂಜೆ ನೆರವೇರಲಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಕೋಟಿ ರೂ. ವೆಚ್ಚದ ಮಾರುಕಟ್ಟೆ ಮತ್ತು ವಾಹನ ನಿಲ್ದಾಣ ಕಾಮಗಾರಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶತಮಾನೋತ್ಸವ ಕಟ್ಟಡ ಕಾಮಗಾರಿಯೂ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದರು.
ಅಕ್ಕನ ಬಳಗದ ಬಳಿಯ ಕಲ್ಯಾಣಿ ಅಭಿವೃದ್ಧಿ, ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಇದೇ ಸಂದರ್ಭ ಭೂಮಿಪೂಜೆ ನೆರವೇರಿಸಲಾಯಿತು. ಸೂಡ ಅಧ್ಯಕ್ಷ ಕೆ.ಎ. ಆದಂ, ತಾಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜು, ಪಕ್ಷದ ಪ್ರಮುಖರಾದ ಚಂದ್ರಮೌಳಿ, ಬಿ.ಬಿ. ಸತೀಶ್, ಎ.ಪಿ. ವೀರರಾಜು, ಶೀಲಾ ಡಿಸೋಜ, ಚೇತನ್, ಇಂಜಿನೀಯರ್ ಹೇಮಂತ್ ಇದ್ದರು.