ಸೋಮವಾರಪೇಟೆ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಜಿ.ಎಂ. ಕಾಂತರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆಗಳ ಅನುಷ್ಠಾನ, ಪ್ರಗತಿ, ಸೌಲಭ್ಯ ಪಡೆಯಲು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಗೃಹಜ್ಯೋತಿ ಯೋಜನೆಯಡಿ ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಟ್ಟಂತೆ 29,220 ಮನೆಗಳಿದ್ದು, ಇದರಲ್ಲಿ 28,070 ವೆರಿಫಿಕೇಷನ್ ಪೂರ್ಣಗೊಂಡಿದೆ ಎಂದು ಸೆಸ್ಕ್ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ 48 ಫಲಾನುಭವಿಗಳ ಪೈಕಿ 42 ಫಲಾನುಭವಿಗಳ ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ದೊಡ್ಡಬ್ಬೂರು ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ ಬೃಹತ್ ನೇರಳೆ ಮರ ಬೀಳುವ ಹಂತದಲ್ಲಿದೆ. ಒಂದು ವೇಳೆ ಮರ ಬಿದ್ದರೆ ಹತ್ತಾರು ಕಂಬಗಳು ಜಖಂಗೊಳ್ಳಲಿವೆ. ಮನೆಗಳಿಗೂ ಅಪಾಯ ಸಂಭವಿಸಲಿದೆ ಎಂದು ಸದಸ್ಯ ಎಸ್.ಎಂ. ಡಿಸಿಲ್ವಾ ಹೇಳಿದರು.
ತಾಲೂಕಿನಲ್ಲಿ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗವಾಗಿದ್ದ 124 ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಿ, ವಾಪಸ್ ಬಿಪಿಎಲ್ ಮಾಡಲಾಗಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು.
ಇದೀಗ ಆಯಾ ತಾಲೂಕು ತಹಸೀಲ್ದಾರ್‌ಗಳೇ ಸ್ಥಳ ಮಹಜರು ನಡೆಸಬೇಕು ಎಂದು ಸರ್ಕಾರಿ ಆದೇಶ ಬಂದಿದೆ. ತಹಸೀಲ್ದಾರ್‌ಗೆ ಎಲ್ಲರ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಆಯಾ ಹೋಬಳಿ ಕೇಂದ್ರದಲ್ಲಿರುವ ಉಪ ತಹಸೀಲ್ದಾರ್‌ಗಳಿಗೆ ಮಹಜರು ನಡೆಸುವ ಅಧಿಕಾರ ನೀಡಲು ಸರ್ಕಾರದ ಗಮನ ಸೆಳೆಯಬೇಕು. ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕಿದೆ ಅಧ್ಯಕ್ಷ ಜಿ.ಎಂ. ಕಾಂತರಾಜ್ ಹೇಳಿದರು.
ಬಿಪಿಎಲ್ ಕಾರ್ಡ್ ವಿತರಣೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ವೀರೇಂದ್ರ ಹೇಳಿದರು.
ಯುವ ನಿಧಿ ಯೋಜನೆ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ಹಿಂದೆ ಉದ್ಯೋಗ ಮೇಳ ಆಯೋಜಿಸುವಂತೆ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಮುಂದಿನ 10 ದಿನಗಳ ಒಳಗೆ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸುವಂತೆ ಅಧ್ಯಕ್ಷ ಕಾಂತರಾಜ್ ನಿರ್ದೇಶನ ನೀಡಿದರು.
ಅಬ್ಬೂರುಕಟ್ಟೆ ಅಂಗನವಾಡಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹುಳುಮಿಶ್ರಿತ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದು ಸದಸ್ಯ ಎಸ್.ಎಂ. ಡಿಸಿಲ್ವಾ ಆರೋಪಿಸಿದರು. ಗರ್ಭಿಣಿಯರು, ಮಕ್ಕಳಿಗೆ ಹುಳು ಹಿಡಿದ ಆಹಾರ ಧಾನ್ಯಗಳ ವಿತರಣೆ ಆಗುತ್ತಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಇಲಾಖಾಧಿಕಾರಿಗಳು ಎಲ್ಲ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಬೇಕೆಂದು ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ.ಪರಮೇಶ್‌ಕುಮಾರ್, ಸದಸ್ಯರಾದ ರಂಗಸ್ವಾಮಿ, ಶೀಲಾ ಡಿಸೋಜ, ರಾಜಮ್ಮ ರುದ್ರಯ್ಯ, ಗೌತಮ್ ಶಿವಪ್ಪ, ರಾಜು, ಭೋಜಪ್ಪ, ವೀರೇಂದ್ರ, ರಾಜಪ್ಪ ಇತರರು ಇದ್ದರು.