ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಪಡಿಸುವುದು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಿ.ಆರ್. ಭರತ್, ಎ.ಸಿ. ಸಾಬು, ಮಹದೇವ್, ಶಾಜಿ, ಹರಿದಾಸ್, ಉದಯ್ ಮತ್ತಿತರರು ಇದ್ದರು. 
ಕೊಡಗು

ಗುತ್ತಿಗೆ ನೌಕರರ ಕಾಯಂಗೆ ಒತ್ತಾಯಿಸಿ ಪ್ರತಿಭಟನೆ

ಮಡಿಕೇರಿ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣವೇ ರದ್ದುಪಡಿಸುವುದು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಹಾಗೂ ತಡೆಹಿಡಿಯಲಾಗಿರುವ ಕನಿಷ್ಠ ವೇತನವನ್ನು ತಕ್ಷಣ ಜಾರಿಗೆ ತರಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು. ಇಎಸ್‌ಐ, ಪಿಎಫ್, ಗ್ರಾಚ್ಯುಟಿ ಮತ್ತು ಬೋನಸ್ ಸೌಲಭ್ಯಗಳನ್ನು ಪಡೆಯಲು ವಿಧಿಸಲಾಗಿರುವ ಆದಾಯ ಹಾಗೂ ಸೇವಾ ಮಿತಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಬೇಕು, ವಿದ್ಯುತ್, ಸಾರಿಗೆ ಸೇರಿದಂತೆ ಯಾವುದೇ ಸಾರ್ವಜನಿಕ ರಂಗದ ಸಂಸ್ಥೆಗಳನ್ನು ಖಾಸಗೀಕರಣ ಮಾಡಬಾರದು, ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸಬೇಕು ಹಾಗೂ ವಸತಿ ರಹಿತ ಕಾರ್ಮಿಕರಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈಗಾಗಲೇ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಮನೆಗೆ ನಿಯೋಗ ತೆರಳಿ ಮನವಿ ಪತ್ರ ಸಲ್ಲಿಸಲಾಗಿದೆ. ಮುಂದಿನ ಭಾನುವಾರ ಮಡಿಕೇರಿ ಶಾಸಕ ಮಂತರ್ ಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಇದು ಕೇವಲ ಸಾಂಕೇತಿಕ ಹೋರಾಟವಷ್ಟೇ. ಸರ್ಕಾರ ಶೀಘ್ರವೇ ಸ್ಪಂದಿಸದಿದ್ದರೆ ಹಾಗೂ ಅಸಂಘಟಿತ ಕಾರ್ಮಿಕರನ್ನು ಕೆರಳಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರವೇ ಬುಡಮೇಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ. ಸಾಬು, ಸಂಘಟನೆಯ ಪ್ರಮುಖರಾದ ಮಹದೇವ್, ಶಾಜಿ, ಹರಿದಾಸ್, ಉದಯ್ ಮತ್ತಿತರರು ಇದ್ದರು.