ಮಡಿಕೇರಿ
ಮಡಿಕೇರಿ ದಸರಾ ಜನೋತ್ಸವದಲ್ಲಿ ವಿಜಯದಶಮಿಯ ದಿನ ಸಂಸ್ಕೃತಿ ಸಿರಿ ಟ್ರಸ್ಟ್ ಕೊಡಗು ಜಿಲ್ಲೆ ಸತತ ನಾಲ್ಕನೇ ವರ್ಷವೂ ವಿಭಿನ್ನ ಹಾಗೂ ವೈಶಿಷ್ಟö್ಯಪೂರ್ಣ ನೃತ್ಯ ಪ್ರದರ್ಶನವನ್ನು ನೀಡಿತು. ಈ ಬಾರಿ ಪ್ರದರ್ಶನಗೊಂಡ ಮಣಿಕಂಠೋದಯ ನೃತ್ಯ ರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಟ್ರಸ್ಟ್ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಮೂಡಿಬಂದ ಈ ನೃತ್ಯರೂಪಕ ಭಕ್ತಿ, ಅಭಿನಯ, ಲಯ ಹಾಗೂ ನೃತ್ಯ ಸಂಯೋಜನೆಯ ಸುಂದರ ಸಮ್ಮಿಲನವಾಗಿತ್ತು. ಕೊಡಗಿನ ಸಂಸ್ಕೃತಿ, ಪರಂಪರೆ ಮತ್ತು ಕಲಾ ವೈಭವವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಟ್ರಸ್ಟ್ ಪ್ರತಿವರ್ಷವೂ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯೂ ತನ್ನ ಕಲಾಪ್ರತಿಭೆಯನ್ನು ಅನಾವರಣಗೊಳಿಸಿತು.
ಈರಮಂಡ ಹರಿಣಿ ವಿಜಯ್ ನೇತೃತ್ವದಲ್ಲಿ, ಮೂರ್ನಾಡಿನ ಸ್ಟೆಪ್ ಅಪ್ ಶಾಡೋ ನೃತ್ಯ ತಂಡದ ಚರಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಮಣಿಕಂಠೋದಯ ನೃತ್ಯರೂಪಕ ಮೂಡಿಬಂತು. ಅಯ್ಯಪ್ಪ ಸ್ವಾಮಿಯ ಜನನ, ಬಾಲ್ಯ, ಜೀವನ ಪಯಣ, ಮಹಿಷಿಯ ಸಂಹಾರ, ಮಣಿಕಂಠನ ದೈವತ್ವದ ಅನಾವರಣ ಹಾಗೂ ಆರಾಧ್ಯ ದೈವವಾಗಿ ಪೂಜಿಸಲ್ಪಡುವ ಹಂತದವರೆಗಿನ ದಿವ್ಯ ಕಥನವನ್ನು ನೃತ್ಯದ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಲಾಯಿತು. ಕಲಾವಿದರ ಭಾವಪೂರ್ಣ ಅಭಿನಯ, ಆಕರ್ಷಕ ನೃತ್ಯ ಸಂಯೋಜನೆ ಮತ್ತು ಕಥೆಯ ನಿರೂಪಣೆ ಪ್ರೇಕ್ಷಕರನ್ನು ಭಕ್ತಿಭಾವದ ಲೋಕಕ್ಕೆ ಕರೆದೊಯ್ಯಿತು. ಪ್ರೇಕ್ಷಕರು ತಂಡದ ಕಲಾಪ್ರತಿಭೆಯನ್ನು ಮುಕ್ತಕಂಠದಿAದ ಶ್ಲಾಘಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಟ್ರಸ್ಟಿ ಈರಮಂಡ ವಿಜಯ್, ಕೆ.ಎಂ. ಗಣೇಶ್, ಉಪಾಧ್ಯಕ್ಷ ಕೋಲೆಯಂಡ ನಿಶಾ ಮೋಹನ್, ಮಂಜುಳಾ ಶಿವಕುಮಾರ್, ಖಜಾಂಚಿ ದೀಪಾ ಕಾವೇರಪ್ಪ, ಸುಚಿತ, ಪ್ರಮಿತ, ಸರಿತಾ, ರಾಧಾ, ಆರ್.ಪಿ. ಚಂದ್ರಶೇಖರ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಆಕರ್ಷಕ ನೃತ್ಯ ರೂಪಕಕ್ಕೆ ಸಾಕ್ಷಿಯಾದರು.
ಸಂಸ್ಕೃತಿ ಸಿರಿ ಟ್ರಸ್ಟ್ ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಆದ್ಯತೆ ನೀಡುವುದರ ಜತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ನೃತ್ಯ ಸ್ಪರ್ಧೆ, ದೇಶಭಕ್ತಿ ಗಾಯನ ಸ್ಪರ್ಧೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಈರಮಂಡ ಹರಿಣಿ ವಿಜಯ್ ಈ ಸಂದರ್ಭ ತಿಳಿಸಿದರು. ಕೊಡಗಿನ ಸಾಂಸ್ಕೃತಿಕ ಪರಂಪರೆಯನ್ನು ಕಲೆಯ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದು, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು ಹಾಗೂ ಸಾಮಾಜಿಕ ಸೇವೆಯ ಮೂಲಕ ಜನರಿಗೆ ನೆರವಾಗುವುದು ಟ್ರಸ್ಟ್ನ ಪ್ರಮುಖ ಆಶಯವಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ತನ್ನ ಸೇವೆಯನ್ನು ಮುಂದುವರಿಸುವ ಸಂಕಲ್ಪವನ್ನು ಟ್ರಸ್ಟ್ ಹೊಂದಿದೆ ಎಂದರು.