ಮಡಿಕೇರಿ
ಇಲ್ಲಿನ ಶಾಂತಿನಿಕೇತನ ಯುವಕ ಸಂಘದ ವತಿಯಿಂದ 48ನೇ ವರ್ಷದ ಅದ್ದೂರಿ ಗಣೇಶೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಮಂಗಳವಾರ ನಡೆಯಿತು. ಶಿಬಿರದಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ಒಟ್ಟು 51 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭ ಮಾತನಾಡಿದ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷ ಕೆ.ಹೆಚ್. ಚೇತನ್, ರಕ್ತದಾನ ಮಾಡಿದ ಎಲ್ಲರನ್ನೂ ಅಭಿನಂದಿಸಿದರು. ರಕ್ತದಾನ ಮತ್ತೊಂದು ಜೀವವನ್ನು ಉಳಿಸುವ ಮಹತ್ವದ ಸೇವೆಯಾಗಿದೆ. ಸಾರ್ವಜನಿಕರಿಂದ ದೊರೆತ ಸಹಕಾರ ಮತ್ತು ಸ್ಪಂದನೆ ಇನ್ನಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆಯಾಗಿದೆ ಎಂದು ಹೇಳಿದರು.
ಗಣೇಶೋತ್ಸವದ ಪ್ರಯುಕ್ತ ಬುಧವಾರ (ಸೆ.23) ಸಂಜೆ 7 ಗಂಟೆಗೆ ಸಾಮೂಹಿಕ ರಂಗಪೂಜೆ ಏರ್ಪಡಿಸಲಾಗಿದೆ. ಸೆ.26ರಂದು ಮಹಾಪೂಜೆಯ ನಂತರ ಶ್ರೀ ಮಹಾ ಗಣಪತಿ ಮೂರ್ತಿಯನ್ನು ಕಥಾ ಸಾರಾಂಶವುಳ್ಳ ಅಲಂಕೃತ ಮಂಟಪದಲ್ಲಿ ಅದ್ಧೂರಿ ಶೋಭಾಯಾತ್ರೆಯ ಮೂಲಕ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ದು ಗೌರಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು.