ಕೊಡಗು

ಕ್ರೀಡಾಕೂಟದಿಂದ ಸುಪ್ತ ಪ್ರತಿಭೆ ಅನಾವರಣ

ಪಾರಣೆಯಲ್ಲಿ ಕ್ರೀಡಾ ಹಬ್ಬಕ್ಕೆ ಶಾಸಕ ಪೊನ್ನಣ್ಣ ಚಾಲನೆ

ನಾಪೋಕ್ಲು: ಕ್ರೀಡಾಕೂಟಗಳು ಪ್ರತಿಯೊಬ್ಬರ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿವೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಇಲ್ಲಿಗೆ ಸಮೀಪದ ಪಾರಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪಾರಾಣೆ ಕ್ರೀಡಾ ಹಬ್ಬ - 2026 ಹಾಗೂ ಅಂತರ್ ಗ್ರಾಮಾಂತರ ಕೈಲ್ ಮುಹೂರ್ತ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೊಡಗಿನ ಕ್ರೀಡಾಪಟುಗಳು ದೇಶದಲ್ಲಷ್ಟೇ ಅಲ್ಲದೆ ವಿಶ್ವಮಟ್ಟದಲ್ಲೂ ಉತ್ತಮ ಹೆಸರು ಗಳಿಸುತ್ತಿದ್ದು, ಅನೇಕ ಪದಕಗಳನ್ನು ಕ್ರೀಡಾಪಟುಗಳು ತಮ್ಮ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಕೊಡಗಿನ ಜನತೆ ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದು, ಗಂಭೀರವಾಗಿ ಪರಿಗಣಿಸಿದರೆ ಉಜ್ವಲ ಭವಿಷ್ಯವನ್ನು ರೂಪಿಸಲು ನೆರವಾಗಲಿದೆ ಎಂದರು.

ಪಾರಣೆ ಕೇಂದ್ರ ಕ್ರೀಡಾ ಮಂಡಳಿಯ ಅಧ್ಯಕ್ಷ ಎಂ. ಸಾಬ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕ್ರೀಡಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.