ಪೊನ್ನಂಪೇಟೆ: ಬೆಂಗಳೂರಿನ ಉತ್ತರಹಳ್ಳಿಯ ಮೀನಾಕ್ಷಿ ರಂಗಮಂಚ ಸಭಾಂಗಣದಲ್ಲಿ ಇತ್ತೀಚೆಗೆ ಭರತನಾಟ್ಯ ಕಲಾವಿದೆ ಆಕರ್ಷಿತಾ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಮಾಜಿ ಆಟಗಾರ ಮಾಳೆಯಂಡ ಅರುಣ್ ಪೂವಯ್ಯ ಅವರು ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸಲ್ಲಿಸಿರುವ ಅಪೂರ್ವ ಸೇವೆ, ಸಾಧನೆ ಹಾಗೂ ಯಶಸ್ವಿ ಕ್ರೀಡಾ ಬದುಕನ್ನು ಗುರುತಿಸಿ ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಕಿರಿಯ ಪೀಳಿಗೆಗೆ ಸ್ಫೂರ್ತಿಯಾಗುವಂತೆ ಕ್ರೀಡಾಸ್ಫೂರ್ತಿ, ಛಲ, ಸ್ಥೈರ್ಯ ಹಾಗೂ ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡು ಮುನ್ನಡೆದ ಕ್ರೀಡಾ ಪಯಣಕ್ಕೆ ದೊರೆತ ಈ ಗೌರವ ನಿಜಕ್ಕೂ ಹೆಮ್ಮೆ ಮತ್ತು ಸಂತೋಷ ತಂದಿದೆ ಎಂದು ಹೇಳಿದರು.
ಈ ಹಿಂದೆ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಂದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಸ್ವೀಕರಿಸಿ ಗೌರವಿಸಲ್ಪಟ್ಟಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಯುವ ಬ್ಯಾಡ್ಮಿಂಟನ್ ಆಟಗಾರರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಈ ಸಂದರ್ಭ ನಾಟ್ಯ ಗುರು ವಿದುಷಿ ಭಾಗ್ಯಾ ಮಂಜುನಾಥ್, ವಕೀಲೆ ಹಾಗೂ ಭರತನಾಟ್ಯ ಕಲಾವಿದೆ ಬಿಂದು ಕಾರ್ತಿಕೇಯನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.