ಕೂಡಿಗೆಯ ಕ್ರೀಡಾಶಾಲೆಯ ಅಥ್ಲೆಟಿಕ್ಸ್ ಮೈದಾನದಲ್ಲಿ ನಡೆದ ಕೊಡಗು ಸೈನಿಕ ಶಾಲೆಯ 2026-27ನೇ ಸಾಲಿನ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು ಗಮನ ಸೆಳೆದರು. 
ಕೊಡಗು

ಕೊಡಗು ಸೈನಿಕ ಶಾಲೆಯಲ್ಲಿ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ

ಕುಶಾಲನಗರ

ಮಹಿಳಾ ಅಥ್ಲೀಟ್‌ಗಳು ಪುರುಷ ಕ್ರೀಡಾಪಟುಗಳಿಗೆ ಸರಿಸಮನಾಗಿ, ಹಲವು ಸಂದರ್ಭಗಳಲ್ಲಿ ಅವರಿಗಿಂತಲೂ ಮಿಗಿಲಾಗಿ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಇತ್ತೀಚಿನ ಏಷ್ಯನ್ ಕ್ರೀಡಾಕೂಟದಲ್ಲಿ ದೇಶದ ನಾರಿ ಶಕ್ತಿ ತೋರಿದ ಸಾಧನೆಯೇ ಇದಕ್ಕೆ ಸಾಕ್ಷಿ ಎಂದು ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಹೇಳಿದರು.

ಕೂಡಿಗೆಯ ಕ್ರೀಡಾಶಾಲೆಯ ಅಥ್ಲೆಟಿಕ್ಸ್ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೊಡಗು ಸೈನಿಕ ಶಾಲೆಯ 2026-27ನೇ ಸಾಲಿನ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಸೈನಿಕ ಶಾಲೆಯ ಮಹಿಳಾ ಕೆಡೆಟ್‌ಗಳು ಆತ್ಮವಿಶ್ವಾಸ ಮತ್ತು ದೃಢತೆಯಿಂದ ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬ ಕೆಡೆಟ್ ಕ್ರೀಡಾಕೂಟದಲ್ಲಿ ಶ್ರೇಷ್ಠತೆಯನ್ನು ಮೆರೆದು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಬೇಕು. ಶೀಘ್ರದಲ್ಲೇ ಕೊಡಗು ಸೈನಿಕ ಶಾಲೆಯಲ್ಲಿಯೇ ನಡೆಯಲಿರುವ ದಕ್ಷಿಣ ವಲಯ ಕ್ರೀಡಾಕೂಟಕ್ಕೆ ಈ ವಾರ್ಷಿಕ ಅಥ್ಲೆಟಿಕ್ಸ್ ಕೂಟವು ಕೆಡೆಟ್‌ಗಳಿಗೆ ಅತ್ಯುತ್ತಮ ಪೂರ್ವಸಿದ್ಧತಾ ವೇದಿಕೆಯಾಗಲಿದೆ ಎಂದರು.

ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಹಾಗೂ ಶಿಸ್ತು, ದೃಢನಿಶ್ಚಯ ಮತ್ತು ಶಾಂತಿಯ ಸಂಕೇತವಾಗಿ ಬಿಳಿ ಪಾರಿವಾಳಗಳನ್ನು ಗಗನಕ್ಕೆ ಹಾರಿಸುವ ಮೂಲಕ ಪಂದ್ಯಾವಳಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಶಾಲೆಯ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಸರ್ವ ಕೆಡೆಟ್‌ಗಳು ಉಪಸ್ಥಿತರಿದ್ದರು.