ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಜೇನು ಕೃಷಿಕರ ಸಮಾವೇಶವದಲ್ಲಿ ಸಾಧಕ ಜೇನು ಕೃಷಿಕರನ್ನು ಸನ್ಮಾನಿಸಲಾಯಿತು. ಡಾ. ಕೆ.ಸಿ. ನಾರಾಯಣಸ್ವಾಮಿ, ಡಾ. ಲಿಂಗದೊರೆ, ಡಾ. ಬದ್ರಿ ಪ್ರಸಾದ್, ಪ್ರೊ. ಆರ್. ಎನ್. ಕೆಂಚರೆಡ್ಡಿ ಇದ್ದರು. 
ಕೊಡಗು

ಕೃಷಿಕರು ಸಂಘಟಿತರಾದರೆ ಹೆಚ್ಚು ಲಾಭ

ಗೋಣಿಕೊಪ್ಪಲು

ಕೆಎಂಎಫ್‌ನ ನಂದಿನಿ ಹಾಲಿನ ಸಹಕಾರ ಸಂಘದ ಮಾದರಿಯಲ್ಲೇ ಜೇನು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ತಮ್ಮದೇ ಆದ ಸ್ವಂತ ಬ್ರಾಂಡ್ ಸೃಷ್ಟಿಸಿ ಮಾರುಕಟ್ಟೆಗೆ ಇಳಿಯುವುದರಿಂದ ಉತ್ತಮ ಆದಾಯ ಗಳಿಸಬಹುದು ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ. ನಾರಾಯಣಸ್ವಾಮಿ ಹೇಳಿದರು. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಹಾಗೂ ಪೊನ್ನಂಪೇಟೆ ವಿಸ್ತರಣಾ ಘಟಕದ ಸಹಯೋಗದೊಂದಿಗೆ ಭಾರತೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಆಶ್ರಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಜೇನು ಕೃಷಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಜೇನು ಕೃಷಿಕರು ತಮ್ಮದೇ ಆದ ಸ್ವಂತ ಬ್ರಾಂಡ್ ಸೃಷ್ಟಿಸಿ ಮಾರುಕಟ್ಟೆಗೆ ಇಳಿಯುವುದರಿಂದ ಉತ್ತಮ ಆದಾಯ ಗಳಿಸಬಹುದು. ಇದರಿಂದ ಸ್ವಯಂ ಉದ್ಯೋಗದ ಜತೆಗೆ ಇತರರಿಗೂ ಕೆಲಸ ನೀಡುವ ಉದ್ಯಮಿಗಳಾಗಲು ಸಾಧ್ಯ. ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಜೇನು ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಹಾಗೂ ಜೇನು ಸಾಕಣೆಯನ್ನು ವೈಜ್ಞಾನಿಕವಾಗಿ ವಿಸ್ತರಿಸುವ ನಿಟ್ಟಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಜೇನು ಉದ್ಯಾನ ಮತ್ತು ಜೇನು ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಜೇನು ಕೃಷಿ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಹಾಗೂ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಪ್ರಸ್ತುತ ಭಾರತದಲ್ಲಿ ವಾರ್ಷಿಕ 1.56 ಲಕ್ಷ ಟನ್ ಜೇನು ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 4,000 ಟನ್ ಜೇನನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ದೇಶದ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ. ಜೇನುನೊಣಗಳ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿ ಬೆಳೆಗಳ ಇಳುವರಿ ಗಮನಾರ್ಹವಾಗಿ ಹೆಚ್ಚಲಿದ್ದು, ಜೇನು ಕೃಷಿಯನ್ನು ಪ್ರೋತ್ಸಾಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜೇನು ಕೃಷಿಕರು ಸಂಘಟಿತರಾಗುವ ಅಗತ್ಯವಿದೆ ಎಂದು ಹೇಳಿದರು.

ಭಾರತೀಯ ಖಾದಿ ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಡಾ. ಲಿಂಗದೊರೆ ಮಾತನಾಡಿ, ಸರ್ಕಾರ ಮತ್ತು ಆಯೋಗ ಜೇನು ಕೃಷಿಗೆ ವ್ಯಾಪಕ ಪ್ರೋತ್ಸಾಹ ನೀಡುತ್ತಿದ್ದರೂ ಫಲಾನುಭವಿಗಳು ಮುಂದೆ ಬಾರದಿರುವುದು ವಿಷಾದಕರ. ಜೇನು ಕೃಷಿ ಆರಂಭಿಸಲು ಬ್ಯಾಂಕುಗಳ ಮೂಲಕ ಶೇ.35 ಸಬ್ಸಿಡಿ ಸಾಲ ಸೌಲಭ್ಯ, ಉಚಿತ ಜೇನು ಪೆಟ್ಟಿಗೆ, ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಉಚಿತವಾಗಿ ಜೇನುಪೆಟ್ಟಿಗೆ ವಿತರಣೆ, ಎಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.10 ಹಾಗೂ ಸಾಮಾನ್ಯ ವರ್ಗದವರಿಗೆ ಶೇ. 20 ವಂತಿಗೆ ಹಣ ಕಟ್ಟಿಸಿಕೊಂಡು ಜೇನುಪೆಟ್ಟಿಗೆಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

À್ವಗಂಗಾವತಿಯ ಹಿರಿಯ ಕೃಷಿ ಅಧಿಕಾರಿ ಹಾಗೂ ಜೇನು ಕೃಷಿ ತಜ್ಞ ಡಾ. ಬದ್ರಿ ಪ್ರಸಾದ್ ಮಾತನಾಡಿ, ಜೇನುನೊಣಗಳ ಜೈವಿಕ ಪ್ರಾಮುಖ್ಯತೆಯನ್ನು ವಿವರಿಸಿದರು. ಜಗತ್ತಿನಲ್ಲಿ ಸುಮಾರು 25 ಬಗೆಯ ಜೇನುಹುಳುಗಳಿವೆ. ಜೇನುಹುಳುವಿನ ದೇಹದ ಮೇಲೆ 3 ಮಿಲಿಯನ್‌ಗಿಂತಲೂ ಹೆಚ್ಚು ಸೂಕ್ಷ್ಮ ರೋಮಗಳು ಇರುವುದರಿಂದ ಇತರೆ ಕೀಟಗಳಿಗಿಂತ ಇವುಗಳ ಮೂಲಕ ಗರಿಷ್ಠ ಪರಾಗಸ್ಪರ್ಶ ಸಾಧ್ಯವಾಗುತ್ತದೆ. ಒಂದು ವೇಳೆ ಭೂಮಿಯ ಮೇಲಿಂದ ಜೇನುಹುಳುಗಳು ಸಂಪೂರ್ಣ ನಾಶವಾದರೆ, ಕೇವಲ 4 ವರ್ಷಗಳಲ್ಲಿ ಮಾನವನ ಆಹಾರ ಬೆಳೆಗಳು ನಾಶವಾಗಲಿವೆ. ಇತರೆ ಕೀಟಗಳಿಂದ ಪರಾಗಸ್ಪರ್ಶವಾದರೂ ಇಳುವರಿ ಮತ್ತು ಗುಣಮಟ್ಟ ತೀವ್ರವಾಗಿ ಕುಸಿಯಲಿದೆ ಎಂದು ಹೇಳಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ನಿವೃತ್ತ ಡೀನ್ ಪ್ರೊ. ಸಿ.ಜಿ. ಕುಶಾಲಪ್ಪ ಮಾತನಾಡಿ, ರೊಬೆಸ್ಟಾ ಕಾಫಿ ತೋಟಗಳಲ್ಲಿ ಜೇನುಪೆಟ್ಟಿಗೆಗಳನ್ನು ಇಡುವುದರಿಂದ ಕಾಫಿ ಇಳುವರಿ ಶೇ. 30ರಷ್ಟು ಹೆಚ್ಚಾಗುತ್ತದೆ ಹಾಗೂ ಕಾಫಿ ಬೀಜದ ಗುಣಮಟ್ಟವೂ ಉತ್ತಮಗೊಳ್ಳುತ್ತದೆ. ಜೇನನ್ನು ಕೇವಲ ಔಷಧಿಯಾಗಿ ನೋಡದೆ ನಿತ್ಯದ ಆಹಾರವಾಗಿ ಬಳಸಿದರೆ ರೈತರ ಆದಾಯ ಹೆಚ್ಚುವುದರ ಜತೆಗೆ ಸಾರ್ವಜನಿಕರ ಆರೋಗ್ಯವೂ ವೃದ್ಧಿಸಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅರಣ್ಯ ಮಹಾವಿದ್ಯಾಲಯದ ಜೇನು ಕೃಷಿ ತಜ್ಞ ಪ್ರೊ. ಆರ್. ಎನ್. ಕೆಂಚರೆಡ್ಡಿ, ಉದ್ಯಮದಾರರಾಗಲು ಜೇನು ಕೃಷಿ ಸಹಕಾರಿಯಾಗಲಿದೆ. ಬೇರೆ ಬೇರೆ ಜಿಲ್ಲೆಯ ಜೇನು ಕೃಷಿಕರನ್ನು ಪರಸ್ಪರ ಒಂದುಗೂಡಿಸಿ ಜೇನು ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ರಾಜ್ಯಮಟ್ಟದ ಜೇನು ಕೃಷಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅರಣ್ಯ ಮಹಾವಿದ್ಯಾಲಯದ ಡೀನ್ ಪ್ರೊ. ದೇವಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ಗಣೇಶ್ ತಿಮ್ಮಯ್ಯ, ರವಿಶಂಕರ್, ಶೇಷಪ್ಪ ಹಾಗೂ ನೆಸ್ಲೆ ಇಂಡಿಯಾದ ಬೋಪಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ಜೇನು ಕೃಷಿಕರಾದ ರಾಜಪ್ಪ, ಕಾರ್ತಿಕ್, ಮಜಾರ್ ಮನ್ನಾಸ್, ಚಂದ್ರಶೇಖರ್ ಇವರನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉನ್ನತ ರ‍್ಯಾಂಕ್ ಗಳಿಸಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ 27 ವಿದ್ಯಾರ್ಥಿಗಳನ್ನು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ. ನಾರಾಯಣಸ್ವಾಮಿ ವೇದಿಕೆಯಲ್ಲಿ ಅಭಿನಂದಿಸಿದರು.