ಕುಶಾಲನಗರ
ನಾಡಹಬ್ಬ ದಸರಾ ಮತ್ತು ನವರಾತ್ರಿ ಉತ್ಸವಕ್ಕೆ ಕುಶಾಲನಗರದ ಮಹಿಳಾ ಸಮಾಜದಲ್ಲಿ ಭಾನುವಾರ ಭಕ್ತಿಭಾವ ಹಾಗೂ ಶ್ರದ್ಧೆಯಿಂದ ಚಾಲನೆ ನೀಡಲಾಯಿತು. ಕಳೆದ ಆರು ದಶಕಗಳಿಂದ ನಿರಂತರವಾಗಿ ಸಾಂಪ್ರದಾಯಿಕ ವೈಭವದೊಂದಿಗೆ ನವರಾತ್ರಿ ಆಚರಿಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಗಿದ್ದು, ಈ ವರ್ಷವೂ ಉತ್ಸವದ ಸಂಭ್ರಮ ಮೇಳೈಸಿದೆ. ನವರಾತ್ರಿ ಉತ್ಸವದ ಪ್ರಥಮ ದಿನದ ಅಂಗವಾಗಿ ದೇವಿಯ ಪ್ರಥಮ ರೂಪವಾದ ಶ್ರೀ ಶೈಲಪುತ್ರಿ ದೇವಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅರ್ಚನೆಗಳನ್ನು ನೆರವೇರಿಸಲಾಯಿತು. ಸುವಾಸಿತ ಪುಷ್ಪಗಳಿಂದ ಅಲಂಕೃತಗೊAಡ ದೇವಿಯ ದಿವ್ಯ ದರ್ಶನ ಪಡೆದ ಭಕ್ತಾದಿಗಳು ತನ್ಮಯರಾದರು. ಸ್ಥಳೀಯ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಮಹಾಮಂಗಳಾರತಿಯಲ್ಲಿ ಪಾಲ್ಗೊಂಡು ಕೃಪಾಶೀರ್ವಾದ ಪಡೆದುಕೊಂಡರು.
ಕುಶಾಲನಗರ ಮಹಿಳಾ ಸಮಾಜ ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ, ಕಳೆದ 60 ವರ್ಷಗಳಿಂದ ಧಾರ್ಮಿಕ ವಿಧಿವಿಧಾನಗಳನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬರುತ್ತಿದೆ. ಈ ನವರಾತ್ರಿ ಆಚರಣೆಯು ಪಟ್ಟಣದ ಸಾಂಸ್ಕೃತಿಕ ಐಕ್ಯತೆ ಹಾಗೂ ಧಾರ್ಮಿಕ ಪರಂಪರೆಗೆ ವಿಶೇಷ ರಂಗು ತಂದಿದೆ.
ನವರಾತ್ರಿಯ ಮುಂಬರುವ ದಿನಗಳಲ್ಲಿ ದೇವಿಗೆ ಪ್ರತಿದಿನವೂ ನವದುರ್ಗೆಯರ ವಿವಿಧ ಅವತಾರಗಳ ವಿಶೇಷ ಅಲಂಕಾರ, ಧಾರ್ಮಿಕ ವಿಧಿವಿಧಾನಗಳು ಹಾಗೂ ಕುಂಕುಮಾರ್ಚನೆ ನಡೆಯಲಿವೆ. ಇದರೊಂದಿಗೆ ಸಮಾಜದ ವತಿಯಿಂದ ಧಾರ್ಮಿಕ ಪ್ರವಚನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.