ವಿರಾಜಪೇಟೆ : ವಿರಾಜಪೇಟೆಯ ಸಿಐಟಿಯು ಕಚೇರಿ ಸಭಾಂಗಣದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ವಿರಾಜಪೇಟೆ, ಪೊನ್ನಂಪೇಟೆ ತಾಲೂಕುಗಳ ಸಂಯುಕ್ತ ಸಮ್ಮೇಳನದಲ್ಲಿ ಬಿಸಿಯೂಟ ಯೋಜನೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮಹಿಳಾ ನೌಕರರ ನಾನಾ ಸಮಸ್ಯೆಗಳು, ಆರ್ಥಿಕ ಸಂಕಷ್ಟಗಳ ಕುರಿತು ಅವಲೋಕ ನಡೆಸಲಾಯಿತು.
ಸಮ್ಮೇಳನಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ ಸಾಬು, ಬಿಸಿಯೂಟ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಕಾರ್ಮಿಕರ ನೈಜ ಸ್ಥಿತಿ ಬಿಚ್ಚಿಟ್ಟರು. ಇಂದು ಗಗನಕ್ಕೇರುತ್ತಿರುವ ಬೆಲೆ ಏರಿಕೆಯ ಕಾಲದಲ್ಲಿ ಅತಿ ಕಡಿಮೆ ಗೌರವ ಧನ ಪಡೆದು ಜೀವನ ನಡೆಸುವುದು ಅಸಾಧ್ಯ. ಅಕ್ಷರ ದಾಸೋಹ ನೌಕರರನ್ನು ಕೇವಲ ’ಸ್ವಯಂ ಸೇವಕರು’ ಅಥವಾ ’ಗೌರವ ಸಿಬ್ಬಂದಿ’ಯಾಗಿ ನೋಡದೆ, ಅವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗ ಭದ್ರತೆ, ಪಿಂಚಣಿ ಹಾಗೂ ಭವಿಷ್ಯ ನಿಧಿ ಇಲ್ಲದಿರುವುದು ಮಹಿಳಾ ನೌಕರರ ಬದುಕನ್ನು ಅಸುರಕ್ಷಿತವಾಗಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಡುಗೆ ಮಾಡುವಾಗ ಎದುರಾಗುವ ಹೊಗೆಯ ಬಾಧೆ, ತೂಕದ ಪಾತ್ರೆಗಳ ಹೊರೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸರ್ಕಾರದ ವತಿಯಿಂದಲೇ ಸೂಕ್ತ ಪರಿಹಾರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಹಕ್ಕುಗಳು ಸರ್ಕಾರದ ಜವಾಬ್ದಾರಿ: ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್ ಮಾತನಾಡಿ, ಅಕ್ಷರ ದಾಸೋಹ ನೌಕರರಾಗಿ ಶ್ರಮಿಸುತ್ತಿರುವ ಬಹುಪಾಲು ಮಹಿಳೆಯರು ಬಡ ಹಾಗೂ ಗ್ರಾಮೀಣ ಹಿನ್ನೆಲೆಯವರಾಗಿದ್ದಾರೆ. ಇವರಿಗೆ ಸರ್ಕಾರದಿಂದ ವಿಶೇಷ ಸಾಮಾಜಿಕ ಹಾಗೂ ಆರ್ಥಿಕ ಭದ್ರತಾ ವ್ಯವಸ್ಥೆ ಸಿಗಬೇಕು ಎಂದು ಒತ್ತಾಯಿಸಿದರು.
ಮಹಿಳಾ ನೌಕರರಿಗೆ ತುರ್ತಾಗಿ ಪ್ರಸೂತಿ ರಜೆ, ಆರೋಗ್ಯ ವಿಮೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುವಂತಾಗಬೇಕು. ಮಹಿಳಾ ನೌಕರರಿಗೆ ಯಾವುದೇ ರೀತಿಯ ಲಿಂಗ ತಾರತಮ್ಯ ಅಥವಾ ಕಿರುಕುಳವಾಗದಂತೆ ತಡೆಯಲು ದೂರು ನಿವಾರಣಾ ಸಮಿತಿಗಳು ಕಾರ್ಯನಿರ್ವಹಿಸಬೇಕು ಆಗ್ರಹಿಸಿದರು.
ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕುಸುಮಾ ಮಾತನಾಡಿ ನೌಕರರ ಕಷ್ಟಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಸಂಘಟನೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ಸಮಿತಿಗಳಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪೊನ್ನಂಪೇಟೆ ತಾಲೂಕು ಸಮಿತಿ ಅಧ್ಯಕ್ಷರಾಗಿ ಶ್ವೇತಾ, ಕಾರ್ಯದರ್ಶಿಯಾಗಿ ಸೀನಾ, ಖಜಾಂಚಿ (ಕೋಶಾಧಿಕಾರಿ)ಸೌಮ್ಯ ಆಯ್ಕೆಯಾದರು.
ವಿರಾಜಪೇಟೆ ತಾಲೂಕು ಸಮಿತಿ ಅಧ್ಯಕ್ಷರಾಗಿ ಉಮ್ಮಕ್ಕ, ಕಾರ್ಯದರ್ಶಿ ರೂಪಾ, ಖಜಾಂಚಿ (ಕೋಶಾಧಿಕಾರಿ)ಎನ್.ಸಿ. ನಳಿನಿ ಆಯ್ಕೆಯಾದರು.
ಈ ಸಮ್ಮೇಳನದಲ್ಲಿ ಬಿಸಿಯೂಟ ನೌಕರರ ಸಂಘದ ನೂರಾರು ಸದಸ್ಯರು ಹಾಗೂ ವಿವಿಧ ಜನಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.