ಮಡಿಕೇರಿ
ಪಕ್ಷದ ಬಲವರ್ಧನೆಗಾಗಿ ಸಂಘಟನಾ ಸೃಜನ್ ಅಭಿಯಾನದ 2ನೇ ಹಂತದ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆ, ಬ್ಲಾಕ್ ಹಾಗೂ ವಲಯ ಮಟ್ಟದಲ್ಲಿ ತಳಮಟ್ಟದ ಅಭಿಪ್ರಾಯ ಕ್ರೋಢೀಕರಿಸಿ ಅಕ್ಟೋಬರ್ 30ರ ಒಳಗೆ ನೂತನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಆರ್.ವಿ. ವೆಂಕಟೇಶ್ ಹೇಳಿದರು.
ರಾಜ್ಯದ 35 ಸಂಘಟನಾ ಜಿಲ್ಲೆಗಳ ಅಧ್ಯಕ್ಷರ ನೇಮಕಾತಿ ನಡೆದಿದೆ. ಕಾರ್ಯಕರ್ತರು ಮತ್ತು ನಾಯಕರ ಅಭಿಪ್ರಾಯ ಆಲಿಸಿ ಬ್ಲಾಕ್ ಹಾಗೂ ವಲಯ ಮಟ್ಟದ ಪದಾಧಿಕಾರಿಗಳ ನೇಮಕ ಮಾಡಲಾಗುತ್ತದೆ. ದಸರಾ ಹಬ್ಬದ ನಂತರ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಿ, ಅಕ್ಟೋಬರ್ 30ರ ಒಳಗೆ ಸಂಪೂರ್ಣ ಪ್ರಕ್ರಿಯೆಯನ್ನು ಮುಗಿಸಲಾಗುವುದು ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಅರ್ಹ ಮತದಾರರ ಹೆಸರು ಪಟ್ಟಿಗೆ ಸೇರ್ಪಡೆಯಾಗಿಲ್ಲ. ಯಾವೊಬ್ಬ ನೈಜ ಮತದಾರನ ಹೆಸರೂ ಕೈಬಿಡಬಾರದು. ಜನಸಾಮಾನ್ಯರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಕೊಡಗು ಉಸ್ತುವಾರಿ ಮಮತಾ ಗಟ್ಟಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಕಮಿಟಿ, ಬ್ಲಾಕ್ ಹಾಗೂ ವಲಯ ಮಟ್ಟಕ್ಕೆ ನೂತನ ಪದಾಧಿಕಾರಿಗಳನ್ನು ತಳಮಟ್ಟದಿಂದ ಸಾಮಾಜಿಕ ನ್ಯಾಯದ ತತ್ತ್ವದಡಿಯಲ್ಲಿ ನೇಮಕ ಮಾಡಲಾಗುವುದು. ವಿರೋಧ ಪಕ್ಷವಾದ ಬಿಜೆಪಿ ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಸಂಘಟನಾ ಸೃಜನ್ ಅಭಿಯಾನದ 2ನೇ ಹಂತದಲ್ಲಿ ಸ್ಥಳೀಯ ಮುಖಂಡರ ಜತೆ ವ್ಯಾಪಕ ಚರ್ಚೆ ನಡೆಸಿ ಪದಾಧಿಕಾರಿಗಳ ನೇಮಕ ಮಾಡಲಾಗುತ್ತದೆ. ಇನ್ನೊಂದೆಡೆ ಬಿಜೆಪಿಯಿಂದ ಮತದಾರರ ಹಕ್ಕು ಕಸಿಯುವ ಹುನ್ನಾರ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 40 ಲಕ್ಷ ನೈಜ ಮತದಾರರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಹೊಸದಾಗಿ ಮತದಾರರನ್ನು ಕೈಬಿಡುವ ಕಾರ್ಯ ನಡೆಯುತ್ತಿದೆ. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆ ಕೇಳಿದರೆ, ಆಯೋಗದ ಪರವಾಗಿ ಬಿಜೆಪಿಯವರೇ ವಕ್ತಾರರಂತೆ ಉತ್ತರಿಸುತ್ತಿದ್ದಾರೆ. ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲೂ ಫಾರಂ ನಂ. 7 ಅನ್ನು ದುರುಪಯೋಗಪಡಿಸಿಕೊಂಡು ನೈಜ ಮತದಾರರ ಹೆಸರು ತೆಗೆದುಹಾಕುವ ಷಡ್ಯಂತ್ರ ನಡೆದಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಪಕ್ಷದಲ್ಲಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತನೂ ಪದಾಧಿಕಾರಿಯಾಗಲು ಅರ್ಹ. ಆ ನಿಟ್ಟಿನಲ್ಲಿ ಪಾರದರ್ಶಕ ಆಯ್ಕೆ ನಡೆಯಲಿದೆ. ಈ ಮಧ್ಯೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳನ್ನು ನಡೆಸಲಾಗುತ್ತಿದ್ದು, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಾರಂ ನಂ.7 ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇಂತಹ ದುಷ್ಕೃತ್ಯಗಳ ವಿರುದ್ಧ ಕಾನೂನು ಹೋರಾಟ ರೂಪಿಸಲಾಗುವುದು. ಈ ವಿಷಯದಲ್ಲಿ ಬಿಜೆಪಿಯವರು ಉತ್ತರ ಕೊಡುವುದು ಬೇಡ, ಚುನಾವಣಾ ಆಯೋಗವೇ ನೇರವಾಗಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮಡಿಕೇರಿ ದಸರಾ ಉತ್ಸವದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ವಿಶೇಷ ಸನ್ಮಾನ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಇದೇ ವೇಳೆ ಪ್ರಕಟಿಸಿದರು.
ಕೆಪಿಸಿಸಿ ವೀಕ್ಷಕ ಪದ್ಮನಾಭ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಇದ್ದರು.