ಕುಶಾಲನಗರ: ಕನ್ನಡ ಭಾಷೆ ಶ್ರೇಷ್ಠ ಹಾಗೂ ಶ್ರೀಮಂತ ಭಾಷೆಯಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರೂ ಆದ ತಹಸೀಲ್ದಾರ್ ರಮೇಶ್ ಬಾಬು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತ, ಕನ್ನಡಪರ ಸಂಘಟನೆಗಳಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಪುತಿನರಹಂತಹ ಕವಿ ಪುಂಗವರು ನಮ್ಮ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬುದು ಆಚರಣೆಯಾಗಬೇಕು ಎಂದರು.
ಕನ್ನಡ ಭಾಷೆ ಸ್ವಾಭಿಮಾನ, ಆತ್ಮಾಭಿಮಾನದ ಸಂಕೇತ. ನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸಬೇಕು. ವಿದ್ಯಾರ್ಥಿಗಳು ಸಾಹಿತ್ಯ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ನಾಡಿನ ಕವಿಗಳು, ದಾಸರು, ಶರಣರು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಮಡಿಕೇರಿ ಯೋಜನಾ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುನೀರ್ ಅಹ್ಮದ್ ಮಾತನಾಡಿ, ಸ್ವಂತಿಕೆ ಮತ್ತು ಸಂಸ್ಕೃತಿ ಎರಡೂ ಎಣ್ಣೆ ಮತ್ತು ದೀಪಗಳ ಪ್ರತೀಕವಿದ್ದಂತೆ. ಭಾಷೆ ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗದೆ ಮನಸ್ಸಿನ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವ ರೀತಿಯಲ್ಲಿ ಇರಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ಆರಕ್ಷಕ ನಿರೀಕ್ಷಕ ಶಿವಣ್ಣ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪೆರುಮಾಳ್ ಇದ್ದರು.
ವಂದೇ ಮಾತರಂ ಗೀತೆಯನ್ನು ಜ್ಞಾನಭಾರತಿ ಶಾಲೆಯ ಶಿಕ್ಷಕಿ ಶೋಭಾ ಭಟ್, ನಾಡಗೀತೆಯನ್ನು ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು, ರಾಷ್ಟ್ರಗೀತೆಯನ್ನು ಫಾತಿಮಾ ಶಾಲೆ ವಿದ್ಯಾರ್ಥಿಗಳು ಮತ್ತು ರೈತ ಗೀತೆಯನ್ನು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಹಾಡಿದರು. ಶಿಕ್ಷಕಿಯರಾದ ಚಂದ್ರಾವತಿ, ಬಿ.ಬಿ.ಹೇಮಲತಾ, ಪಿ.ಎಂ.ರಶ್ಮಿ, ಪಿಎಂಶ್ರೀ ಶಾಲೆಯ ಶಿಕ್ಷಕಿ ಸಿಂಧೂರಾಣಿ ಇದ್ದರು.