ಮಡಿಕೇರಿ
ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣದ ಜತೆಗೆ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಉದ್ದೇಶದಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮಡಿಕೇರಿ ಪ್ರಾದೇಶಿಕ ಕಚೇರಿ ವತಿಯಿಂದ ನಗರದ ಚೈನ್‌ಗೇಟ್ ಮುಖ್ಯರಸ್ತೆಯಲ್ಲಿ ಗುರುವಾರ ವಿಶೇಷ ಸ್ವಚ್ಛತಾ ಸೇವಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಅಭಿಯಾನದ ಅಂಗವಾಗಿ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಿದರು. ಸ್ವಚ್ಛ ನಗರ ನಿರ್ಮಾಣದಲ್ಲಿ ನಿತ್ಯ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆಯ ಜವಾಬ್ದಾರಿಯ ಮಹತ್ವವನ್ನು ತಿಳಿಸಲಾಯಿತು.
ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಉದಯ್ ಕುಮಾರ್ ಈ ವೇಳೆ ಮಾತನಾಡಿ, ಸ್ವಚ್ಛತೆ ಎನ್ನುವುದು ಕೇವಲ ಸರ್ಕಾರ ಅಥವಾ ಪೌರಕಾರ್ಮಿಕರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ತನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ನಗರವನ್ನು ಸ್ವಚ್ಛವಾಗಿಡಲು ಪ್ರತಿನಿತ್ಯ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯನ್ನು ಜೀವನದ ಅವಿಭಾಜ್ಯ ಭಾಗವನ್ನಾಗಿ ಮಾಡಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ಎಂ.ಎ. ರವಿಚಂದ್ರನ್, ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.