ವಿರಾಜಪೇಟೆ ನಗರದ ಬಸ್ ನಿಲ್ದಾಣದ ಬಳಿ ಪಂಜಾರ್ ಪೇಟೆ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ದುರ್ಗ ಪ್ರಸಾದ್, ಶಿವು, ಸಿ.ಎ. ರಜಾಕ್, ರಜೀಶ್, ದಾಮೋದರ್ ಆಚಾರ್ಯ ಇತರರಿದ್ದರು.  
ಕೊಡಗು

ಏಕೀಕರಣ ಹೋರಾಟದಿಂದ ಕರ್ನಾಟಕ ಉದಯ

ಡಾ.ದುರ್ಗಾಪ್ರಸಾದ್ ಹೇಳಿಕೆ

ವಿರಾಜಪೇಟೆ: ಏಕೀಕರಣ ಹೋರಾಟದ ಮೂಲಕ ವಿಶಾಲ ಮೈಸೂರು ಪ್ರಾಂತ್ಯ ಕರ್ನಾಟಕ ರಾಜ್ಯವಾಗಿ ಉದಯವಾಯಿತು ಎಂದು ವೈದ್ಯ ಡಾ.ಇ.ಆರ್.ದುರ್ಗಾಪ್ರಸಾದ್ ಹೇಳಿದರು.

ನಗರದ ಬಸ್ ನಿಲ್ದಾಣದ ಬಳಿ ಪಂಜಾರ್ ಪೇಟೆ ಆಟೋ ಚಾಲಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಈ ಹಿಂದೆ ಕನ್ನಡ ಭಾಷೆ ಮಾತನಾಡುವವರು ಬಾಂಬೆ ಪ್ರಾಂತ್ಯ, ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದವು. ಕನ್ನಡಿಗರು ಒಂದೇ ರಾಜ್ಯದಲ್ಲಿ ವಾಸವಿರಬೇಕು ಎನ್ನುವ ಉದ್ದೇಶದಿಂದ 1956 ರಲ್ಲಿ ಮೈಸೂರು ರಾಜ್ಯವಾಯಿತು ಎಂದರು.

ಉದ್ಯಮಿ ಬಿ.ವಿ.ಹೇಮಂತ್ ಮಾತನಾಡಿ, ಜಿಲ್ಲೆಯಲ್ಲಿ ಸ್ಥಳೀಯ ಭಾಷೆ, ಆಡು ಭಾಷೆಯ ನೆಲೆಯಿದ್ದರೂ ಇತ್ತೀಚೆಗೆ ಹೊರ ರಾಜ್ಯದ ಜನರಿಂದ ಹಿಂದಿ ಭಾಷೆ ಮುಖ್ಯ ಎಂದು ಬಿಂಬಿಸಲಾಗುತ್ತಿದೆ. ರಾಜ್ಯದ ಬೃಹತ್ ನಗರಗಳಲ್ಲಿ ಕನ್ನಡ ಭಾಷೆಯ ಮೇಲೆ ಆಂಗ್ಲ ಸೇರಿದಂತೆ ವಿವಿಧ ಭಾಷೆಗಳ ಪ್ರಭಾವ ಬೀರುತ್ತಿದೆ. ಕನ್ನಡ ನಾಡು ನುಡಿಗಾಗಿ ಬದ್ಧರಾಗಿ ಇತರ ಭಾಷಿಕರಿಗೆ ಕನ್ನಡ ಭಾಷೆ ಕಲಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉಮ್ಮರ್ ಪಂಜಾರ್ ಪೇಟೆ, ಕ್ರೀಡಾಪಟು ಅನಿಲ್, ದೀಪಕ್ ದಾಸ್ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸಿ.ಎ.ರಜಾಕ್, ಹಿರಿಯ ಆಟೋ ಚಾಲಕರಾದ ರಜೀಶ್, ದಾಮೋದರ್ ಆಚಾರ್ಯ, ಕಾವೇರಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅದ್ಯಕ್ಷರಾದ ಶಿವು ಮತ್ತು ಪಂಜರ್ ಪೇಟೆ ಆಟೋ ಚಾಲಕರು ಮತ್ತು ಮಾಲೀಕರು, ಸಾರ್ವಜನಿಕರು ಇದ್ದರು.