ಮೂರ್ನಾಡು ಸಮೀಪದ ಪಾಲೆಮಾಡುವಿನ ಕ್ಯಾನ್ಶಿರಾಂ ನಗರದಲ್ಲಿ ಏರ್ಪಡಿಸಿದ್ದ ಎಸ್‌ಐಆರ್ ಸಂತ್ರಸ್ತರ ಸಾರ್ವಜನಿಕ ಸಮೀಕ್ಷೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿದರು. ಡಿ.ಎಸ್. ನಿರ್ವಾಣಪ್ಪ, ಅಮೀನ್ ಮೊಹಿಸೀನ್, ಮೊಣ್ಣಪ್ಪ, ಭೋಜಣ್ಣ ಸೋಮಯ್ಯ ಇದ್ದರು. 
ಕೊಡಗು

ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣ ರದ್ದು ಮಾಡಿ

ಮಡಿಕೇರಿ

ಮುಖ್ಯಚುನಾವಾಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾ ಮಾಡಿ ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣ ರದ್ದುಮಾಡಬೇಕು. 2022 ರ ನಂತರ ಚುನಾವಣಾ ಆಯೋಗದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಒತ್ತಾಯಿಸಿದ್ದಾರೆ. ಮಡಿಕೇರಿ ತಾಲೂಕು ಮೂರ್ನಾಡು ಸಮೀಪದ ಪಾಲೆಮಾಡುವಿನ ಕ್ಯಾನ್ಶಿರಾಂ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್‌ಐಆರ್ ಸಂತ್ರಸ್ತರ ಸಾರ್ವಜನಿಕ ಸಮೀಕ್ಷೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಎಸ್‌ಐಆರ್ ಪ್ರಕ್ರಿಯೆ ನಡೆಸಿ ಇಡೀ ಭಾರತದಲ್ಲಿ 13 ಕೋಟಿ ಮತದಾರರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಗಿದೆ. ಕರ್ನಾಟಕದಲ್ಲಿ 1.08 ಕೋಟಿ ಮತದಾರರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಎಸ್‌ಐಆರ್ ಹೆಸರಿನಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದಿರುವುದನ್ನು ಕರ್ನಾಟಕದಲ್ಲಿ ಆಗುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇಲ್ಲಿಉ ಜನರು ಪ್ರಜ್ಞಾವಂತರಿದ್ದಾರೆ. ಚುನಾವಣಾ ಆಯೋಗಕ್ಕೆ ಮತದಾರರನ್ನು ತೆಗೆಯುವ ಹಕ್ಕಿಲ್ಲ. ಹಾಗಾಗಿ ಚುನಾವಣಾ ಆಯೋಗ ನೆಪ ಮಾತ್ರ. ಕೇಂದ್ರದಲ್ಲಿ ಇರುವ ಈಗಿನ ಸರ್ಕಾರಕ್ಕೆ ಬಡವರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರ ಮತ ಬೇಕಾಗಿಲ್ಲ. ಗಟ್ಟಿ ಸಂವಿಧಾನ ಇರುವುದರಿಂದ ನೇರವಾಗಿ ಪ್ರಜೆಗಳನ್ನು ಕೊಲ್ಲಲು ಆಗುವುದಿಲ್ಲ. ಹಾಗಾಗಿ ಅಂಥವರ ಮತದಾನದ ಹಕ್ಕನ್ನು ಕೊಲ್ಲುವ ಮೂಲಕ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ಸಂಚರಿಸಿ ಎಸ್‌ಐಆರ್‌ನಿಂದ ಆಗಿರುವ ಅವಾಂತರಗಳ ಬಗ್ಗೆ ದಾಖಲೆ ಸಂಗ್ರಹ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ನ್ಯಾಯಾಲಯದ ಕದ ತಟ್ಟಲಾಗುವುದು. ಇದಕ್ಕೂ ಮೊದಲು ಈ ದಾಖಲೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಕರ್ನಾಟದಲ್ಲಿ ಮತದಾನ ವಂಚಿತರ ಪರವಾಗಿ ನಿಲ್ಲಬೇಕು, ಎಸ್‌ಐಆರ್ ಸಂಬAಧ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಒತ್ತಾಯಿಸಲಾಗುತ್ತದೆ. ಹೋರಾಟವನ್ನು ನವದೆಹಲಿಗೂ ವಿಸ್ತರಿಸಲಾಗುತ್ತದೆ. ಝೆನ್‌ಜೀಗಳೂ ಈ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಎಸ್‌ಐಆರ್ ವಿರುದ್ಧ ಕರ್ನಾಟಕದಲ್ಲಿ ಧ್ವನಿ ಎತ್ತುತ್ತಿದ್ದಂತೆಯೇ ಇತರ ರಾಜ್ಯಗಳಿಂದಲೂ ವಿರೋಧ ಕೇಳಿಬರುತ್ತಿದೆ. ಎನ್ನರಲ್ಲೂ ಸಂಘಟಿಸಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು. ಪ್ರತಿ ಮತದಾರನಿಗೂ ಮತದಾನದ ಹಕ್ಕು ಸಿಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆ ಸಂದರ್ಭ ಚುನಾವಣಾ ಆಯೋಗದಿಂದ ವಿವಿಧ ಕಾರಣಗಲಿಂದ ನೊಟೀಸ್ ಪಡೆದಿರುವ ಜಿಲ್ಲೆಯ ವಿವಿಧೆಡೆಯ ಮತದಾರರು ಇದೇ ಸಂದರ್ಭ ತಮ್ಮ ಅಹವಾಲು ತೋಡಿಕೊಂಡರು. ಮತದಾನದ ಹಕ್ಕು ರದ್ದಾಗದಂತೆ ಮಾಡಿ ಎಂದು ಮನವಿ ಮಾಡಿಕೊಂಡರು.

ಸಿಪಿಐಎಲ್‌ಎಂ ಮುಖಂಡ ಡಿ.ಎಸ್. ನಿರ್ವಾಣಪ್ಪ, ಭೂಮಿ ಮತ್ತು ವಸತಿರಹಿತರ ಸಂಘಟನೆ ಅಮೀನ್ ಮೊಹಿಸೀನ್, ಮೊಣ್ಣಪ್ಪ, ಆಮ್ ಆದ್ಮಿ ಪಕ್ಷದ ಭೋಜಣ್ಣ ಸೋಮಯ್ಯ ಇದ್ದರು.