ಶ್ರೀಗಂಧದ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.  Two sandalwood smugglers arrested
ಕೊಡಗು

ಇಬ್ಬರು ಗಂಧದ ಮರ ಕಳ್ಳರ ಬಂಧನ

Two sandalwood smugglers arrested

ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದ ಕೆ.ಎಂ. ಪ್ರಕಾಶ್ ಎಂಬುವರ ಜಾಗದಿಂದ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಸೋಮವಾರ ಬಂಧಿಸಿದ್ದಾರೆ

ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಕೋಟೆ ಪೈಸಾರಿ ಗ್ರಾಮದ ನಿವಾಸಿ ಎಂ.ಎಂ, ಚಂದ್ರ (49) ಹಾಗೂ ಜಲ್ಲಕಟ್ಟೆ ಗ್ರಾಮದ ನಿವಾಸಿ ಎಚ್.ಪಿ. ಉಮೇಶ (27) ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.

ಆರೋಪಿಗಳು ಶ್ರೀಗಂಧದ ಮರವನ್ನು ಚೆನ್ನಯ್ಯನಕೋಟೆ ಗ್ರಾಮ ಸಮೀಪ ತಂದು, ಅದರ ಚಕ್ಕೆ ಹಾಗೂ ಛೇಗು ಬೇರ್ಪಡಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿ 20 ಕೆಜಿ ತೂಕದ ಗಂಧದ ಕೊರಡು, 15 ಕೆಜಿ ಗಂಧದ ತುಂಡುಗಳು ಹಾಗೂ 20 ಕೆಜಿ ಗಂಧದ ಚಕ್ಕೆ ಸೇರಿದಂತೆ ಒಟ್ಟು 55 ಕೆಜಿ ಹಸಿ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಡಿ.ಸಿ.ಎಫ್. ವಿನಿತಾ ಚೌಹಾಣ್ ಹಾಗೂ ಎ.ಸಿ.ಎಫ್. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ, ಆರ್.ಎಫ್.ಓ. ರಾಕೇಶ್ ಮತ್ತು ಡಿ.ಆರ್.ಎಫ್.ಓ. ಶಶಿ, ಅರಣ್ಯ ರಕ್ಷಕರಾದ ರಾಜೇಶ್, ಆರ್.ಆರ್.ಟಿ. ತಂಡದ ರೋಷನ್, ಪ್ರದೀಪ್, ಪ್ರವೀಣ್, ನಿತಿನ್, ಮಂಜು, ಪ್ರಮೋದ್ ಹಾಗೂ ಚಾಲಕ ಸಂಜು ಭಾಗವಹಿಸಿದ್ದರು.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ತನಿಖೆ ಮುಂದುವರೆಸಿದೆ.