ಕುಶಾಲನಗರ
ರಾಷ್ಟ್ರೀಯ ಹೆದ್ದಾರಿ 275ರ ಕುಶಾಲನಗರ-ಮಡಿಕೇರಿ ನಡುವಿನ ಆನೆಕಾಡು ತಿರುವಿನ ಆಸುಪಾಸಿನಲ್ಲಿ ಪದೇ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನರ ಜೀವದ ಜತೆ ಚೆಲ್ಲಾಟವಾಡದೆ ಅಪಘಾತ ತಡೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಇದುವರೆಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಹೆದ್ದಾರಿ ನಿರ್ವಹಣೆ ಹಾಗೂ ಅಪಘಾತ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಇಲಾಖೆಯ ನಿಯಮಾನುಸಾರ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದರು.
ಒಂದು ವರ್ಷದ ಅವಧಿಯಲ್ಲಿ ಇಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ 16 ಮಂದಿ ಸಾವನ್ನಪ್ಪಿರುವ ಬಗ್ಗೆ ರಾಷ್ಟಿçÃಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಂತರ್ ಗೌಡ, ಆನೆಕಾಡು ಭಾಗದಲ್ಲಿ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವೇಗ ನಿಯಂತ್ರಣ ಕ್ರಮ, ಸಮರ್ಪಕ ಬೆಳಕಿನ ವ್ಯವಸ್ಥೆ, ಅಗತ್ಯವಿರುವ ಕಡೆಗಳಲ್ಲಿ ಸ್ಪೀಡ್ ಬ್ರೇಕರ್, ಸೂಚನಾ ಫಲಕಗಳು ಹಾಗೂ ಇತರ ರಸ್ತೆ ಸುರಕ್ಷತಾ ವ್ಯವಸ್ಥೆಗಳನ್ನು ತ್ವರಿತವಾಗಿ ಅಳವಡಿಸಬೇಕು. ಈ ಕ್ರಮಗಳನ್ನು ವಿಳಂಬ ಮಾಡದೆ ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಂಜೀವ್ ಕುಮಾರ್ ಅವರಿಗೆ ಸೂಚಿಸಿದರು.
ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ ನೀಡಬೇಕು. ಅಪಘಾತಕ್ಕೆ ಕಾರಣವಾಗಬಹುದಾದ ರಸ್ತೆ ವಿನ್ಯಾಸ, ವೇಗ ನಿಯಂತ್ರಣ, ಬೆಳಕಿನ ಕೊರತೆ ಹಾಗೂ ವಾಹನ ಸಂಚಾರಕ್ಕೆ ಸಂಬAಧಿಸಿದ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಗೀತಾ ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತಾ ಅವರ ಸಮ್ಮುಖದಲ್ಲಿ ಆನೆಕಾಡು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು.
ಸಭೆಯ ಬಳಿಕ ಶಾಸಕ ಡಾ. ಮಂತರ್ ಗೌಡ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಆನೆಕಾಡು ಅಪಘಾತ ವಲಯಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಅಪಘಾತಗಳು ಸಂಭವಿಸುತ್ತಿರುವ ಸ್ಥಳದ ರಸ್ತೆ ಪರಿಸ್ಥಿತಿ, ವಾಹನಗಳ ಸಂಚಾರ, ವೇಗ ನಿಯಂತ್ರಣ ವ್ಯವಸ್ಥೆ, ಸೂಚನಾ ಫಲಕಗಳು ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ನಿಯಮಾನುಸಾರ ಕೈಗೊಳ್ಳಬೇಕಾದ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಪಘಾತ ಸಂಭವಿಸುವ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ರೂಪಿಸುವಂತೆ ನಿರ್ದೇಶನ ನೀಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ ಗುಂಡೂರಾವ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಮತ್ತಿತರರು ಈ ಸಂದರ್ಭ ಇದ್ದರು.
ಇತ್ತೀಚೆಗೆ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಹೊಸಕೋಟೆಯ ರತನ್ ಉನ್ನಿ ಹಾಗೂ ಆದರ್ಶ ಮನೆಗಳಿಗೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ದುಃಖದಲ್ಲಿರುವ ಪೋಷಕರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಶಾಸಕರು, ಕುಟುಂಬದ ಮುಂದಿನ ಜೀವನೋಪಾಯಕ್ಕೆ ಅಗತ್ಯವಿರುವ ನೆರವು ಹಾಗೂ ಸರ್ಕಾರದ ವತಿಯಿಂದ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದರು. ಕುಟುಂಬಕ್ಕೆ ಅಗತ್ಯ ನೆರವು ದೊರಕಿಸುವ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಭರವಸೆ ನೀಡಿದರು. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದು ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವವರ ಮನೆಗಳಿಗೂ ಶಾಸಕರು ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿದ ಅವರು, ವೈದ್ಯಕೀಯ ವರದಿಗಳ ಕುರಿತು ಮಾಹಿತಿ ಪಡೆದು ಅಗತ್ಯ ವೈದ್ಯಕೀಯ ನೆರವಿನ ಬಗ್ಗೆ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದರು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಶಾಸಕರು, ಕುಟುಂಬದವರಿಗೆ ಧೈರ್ಯ ತುಂಬಿದರು.