ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಯೋಗಾತ್ಮಕ ಕೇಂದ್ರದಲ್ಲಿ ಆಯೋಜಿಸಿದ್ದ ಅಣಬೆ ಕೃಷಿ ಉಚಿತ ತರಬೇತಿ ಮತ್ತು ಪ್ರದರ್ಶನವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಿದರು. ಡಾ. ಟಿ.ಕೆ. ಬೆಹೆರಾ, ಬೋಸ್ ಮಂದಣ್ಣ, ಡಾ. ಚಂದ್ರಶೇಖರ್, ಡಾ. ಪ್ರಕಾಶ್ ಪಾಟೀಲ್, ಡಾ. ಬಿ.ಎಂ. ಮುರಳೀಧರ್ ಇದ್ದರು. 
ಕೊಡಗು

ಅಣಬೆ ಬೇಸಾಯ ಉದ್ಯಮವಾಗಲಿ

ಮಡಿಕೇರಿ

ಕೊಡಗಿನ ಅಣಬೆ ಉತ್ಪಾದಕರೆಲ್ಲರೂ ಒಂದಾಗಿ ಸಂಘಟನೆ ರಚಿಸಿಕೊಂಡು ಒಂದೇ ಬ್ರ‍್ಯಾಂಡ್ ಅಡಿಯಲ್ಲಿ ಉತ್ಪಾದನೆ ಮಾಡಿದರೆ ದೇಶ, ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಹೇಳಿದರು.

ಕುಶಾಲನಗರ ತಾಲೂಕು ಚೆಟ್ಟಳ್ಳಿಯಲ್ಲಿರುವ ಐಸಿಎಆರ್ - ಐಐಹೆಚ್‌ಆರ್ ಕೇಂದ್ರೀಯ ತೋಟಗಾರಿಕಾ ಪ್ರಯೋಗಾತ್ಮಕ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಣಬೆ ಕೃಷಿ ಉಚಿತ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಣಬೆ ಕೃಷಿ ಎನ್ನುವುದು ಇತರ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದಂತಲ್ಲ. ಕೃಷಿ ತ್ಯಾಜ್ಯವನ್ನು ಅತ್ಯಂತ ಲಾಭದಾಯಕವಾಗಿ ಬಳಸಿಕೊಳ್ಳಲು ಅಣಬೆ ಬೇಸಾಯ ಸೂಕ್ತ ಪರ್ಯಾಯವಾಗಿದೆ. ಪ್ರಸ್ತುತ ಕೃಷಿ ಕ್ಷೇತ್ರ ಹವಾಮಾನ ವೈಪರೀತ್ಯ, ಭೂಮಿ ವಿಘಟನೆ ಹಾಗೂ ಮಣ್ಣಿನ ಆರೋಗ್ಯ ಕ್ಷೀಣಿಸುವಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಜತೆಗೆ ಕೃಷಿ ಉತ್ಪನ್ನಗಳಿಗೆ ಸ್ಥಿರ ಮತ್ತು ಸರಿಯಾದ ಬೆಲೆ ಸಿಗದಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದೇಶದಲ್ಲಿ ಶೇ. 80ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ದೇಶದ ಶೇ. 50ರಷ್ಟು ಆಹಾರದ ಅಗತ್ಯತೆಯನ್ನು ಪೂರೈಸುತ್ತಿದ್ದಾರೆ. ಬದಲಿ ಉದ್ಯೋಗ ಸಿಕ್ಕಿದರೆ ಕೃಷಿ ಕ್ಷೇತ್ರ ಬಿಡಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಅವರನ್ನು ಕೃಷಿಯಿಂದ ವಿಮುಖರಾಗದಂತೆ ನೋಡಿಕೊಳ್ಳಲು ಪರ್ಯಾಯ ಬೆಳೆಗಳ ಅಳವಡಿಕೆ ಅತ್ಯಗತ್ಯವಾಗಿದೆ.

ಕೊಡಗಿನ ರಾತ್ರಿ ತಾಪಮಾನ ವೈಜ್ಞಾನಿಕವಾಗಿ ಅಣಬೆ ಬೆಳೆಯಲು ಅತ್ಯಂತ ಸಹಕಾರಿಯಾಗಿದೆ. ಅಣಬೆಯಲ್ಲಿ ಹೇರಳ ಔಷಧೀಯ ಗುಣಗಳಿದ್ದು, ದೇಹದ ಆರೋಗ್ಯ ಕಾಪಾಡಲು ಹಾಗೂ ಪೌಷ್ಟಿಕಾಂಶದ ನ್ಯೂನತೆ ಸರಿದೂಗಿಸಲು ಇದು ಸಹಕಾರಿ. ಸಮಾಜದಲ್ಲಿ ಅಣಬೆ ಕುರಿತು ಇರುವ ತಪ್ಪು ಗ್ರಹಿಕೆಗಳು ದೂರವಾಗಬೇಕು. ಕೃಷಿಯಲ್ಲಿ ಶೇ. 50-60 ಭಾಗ ಮಹಿಳೆಯರೇ ಭಾಗಿಯಾಗುತ್ತಿದ್ದಾರೆ. ಅಣಬೆ ಬೇಸಾಯವನ್ನು ಮಹಿಳೆಯರು ಹವ್ಯಾಸವಾಗಿ ತೆಗೆದುಕೊಂಡರೆ ತಮ್ಮ ಸಮಯವನ್ನು ಉತ್ಪಾದಕ ರೀತಿಯಲ್ಲಿ ಕಳೆಯಬಹುದು. ಕೃಷಿ ತ್ಯಾಜ್ಯವನ್ನು ಅಣಬೆಗೆ ಬಳಸಿ, ನಂತರ ಅಣಬೆಯ ತ್ಯಾಜ್ಯವನ್ನು ಮರಳಿ ಕೃಷಿಗೆ ಬಳಸುವ ಮೂಲಕ ಲಾಭಗಳಿಸಲು ಸಾಧ್ಯವಿದೆ.

ಅಣಬೆ ಉತ್ಪಾದನೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು, ಅಣಬೆ ಬೇಸಾಯವನ್ನು ತಾತ್ಕಾಲಿಕ ಕೆಲಸವೆಂದು ನೋಡದೆ ಅದನ್ನೊಂದು ಉದ್ಯಮವಾಗಿ ಬೆಳೆಸಬೇಕು ಎಂದರು.

ಬೆಂಗಳೂರಿನ ಐಸಿಎಆರ್-ಐಐಎಚ್‌ಆರ್ ನಿರ್ದೇಶಕ ಡಾ. ಟಿ.ಕೆ. ಬೆಹೆರಾ ಮಾತನಾಡಿ, ಅಣಬೆ ಬೇಸಾಯ ಮಾಡಲು ದೊಡ್ಡ ಪ್ರಮಾಣದ ಭೂಮಿ ಬೇಕಾಗಿಲ್ಲ, ಮನೆಯಲ್ಲೇ ಸುಲಭವಾಗಿ ಬೆಳೆಯಬಹುದು. ಪಶ್ಚಿಮ ಘಟ್ಟಗಳ ಭಾಗದಲ್ಲಿ ಕೃಷಿ ವೈವಿಧ್ಯತೆಗೆ ಸಾಕಷ್ಟು ಅವಕಾಶಗಳಿದ್ದು, ಚೆಟ್ಟಳ್ಳಿಯ ಐಸಿಎಆರ್ - ಐಐಹೆಚ್‌ಆರ್ ಕೇಂದ್ರೀಯ ತೋಟಗಾರಿಕಾ ಪ್ರಯೋಗಾತ್ಮಕ ಕೇಂದ್ರ ವಿದೇಶಿ ತಳಿಯ ಹಣ್ಣು ಬೆಳೆಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸುತ್ತಿದೆ. ಕೇಂದ್ರಿದಿAದ ಅವಾಕಡೋ ಹಣ್ಣಿನ ಎರಡು ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಈ ತಳಿ ಬೆಳೆಯುವ ಮೂಲಕ ದೇಶಕ್ಕೆ ಕೋಟ್ಯಂತರ ರೂ. ಆದಾಯ ತಂದುಕೊಡುವ ಮೂಲವಾಗಿ ಬೆಳೆದಿದೆ. ಈ ಕೇಂದ್ರದಕಲ್ಲಿ ಸಾಕಷ್ಟು ತಜ್ಞರು ಇದ್ದು ಇವರ ಅರಿವಿನ ಜ್ಞಾನವನ್ನು ಸ್ಥಳೀಯರ ರೈತರು ಬಳಸಿಕೊಳ್ಳಬೇಕು. ಯಾವಾಗ ಬೇಕಾದರೂ ಇಲ್ಲಿಂದ ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು.

ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಕೊಡಗಿನಲ್ಲಿ ಮಣ್ಣಿನ ಗುಣಮಟ್ಟ ಹಾಳಾಗಿರುವುದರಿಂದ ಕಾಫಿ ಮತ್ತು ಮೆಣಸು ಬೆಳೆಯಲು ತೊಂದರೆ ಎದುರಾಗುತ್ತಿದೆ. ಆದರೆ ಅಣಬೆ ಬೇಸಾಯವನ್ನು ನಿಯಂತ್ರಿತ ವಾತಾವರಣದಲ್ಲಿ ಅತ್ಯಂತ ಸುಲಭವಾಗಿ ಮಾಡಬಹುದು. ಕೊಡಗಿನ ಹವಾಮಾನ ಇದಕ್ಕೆ ಪೂರಕವಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಅಣಬೆ ಬೆಳೆದ ನಂತರ ಸಿಗುವ ತ್ಯಾಜ್ಯ ಮಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಗೊಬ್ಬರವಾಗಲಿದ್ದು, ಮಹಿಳೆಯರು ಈ ಉದ್ಯಮದತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾರ್ಟಿಕಲ್ಚರ್‌ನ ಹಿರಿಯ ವಿಜ್ಞಾನಿ ಡಾ. ಚಂದ್ರಶೇಖರ್ ಮಾತನಾಡಿ, ಕೊಡಗಿನ ವಾತಾವರಣ ಅಣಬೆ ಬೆಳೆಗೆ ಅತ್ಯಂತ ಸೂಕ್ತವಾಗಿದೆ. ಎಲ್ಲಾ ತಾಪಮಾನದಲ್ಲೂ ಬೆಳೆಯುವಂತಹ ಅಣಬೆ ತಳಿಗಳು ನಮ್ಮ ಕೇಂದ್ರದಲ್ಲಿ ಲಭ್ಯವಿವೆ. ಅಣಬೆ ಕೃಷಿ ಹಾಗೂ ಬೀಜ ಉತ್ಪಾದನೆ ಕುರಿತು ಆಸಕ್ತರಿಗೆ 5 ದಿನಗಳ ವಿಶೇಷ ತರಬೇತಿ ನೀಡಲಾಗುವುದು. ಅಣಬೆಯಿಂದ ಉಪಉತ್ಪನ್ನಗಳನ್ನು ಕೂಡ ತಯಾರಿಸಲು ಸಾಧ್ಯವಿದ್ದು ಲಾಭದಾಯಕವಾಗಿ ಉದ್ಯಮ ಬೆಳೆಸುವ ಅವಕಾಶಗಳಿವೆ ಎಂದು ಹೇಳಿದರು.

ಐಸಿಎಆರ್-ಐಐಎಚ್‌ಆರ್ ಹಣ್ಣು ವಿಭಾಗದ ಯೋಜನಾ ನಿರ್ದೇಶಕ ಡಾ. ಪ್ರಕಾಶ್ ಪಾಟೀಲ್ ಮಾತನಾಡಿ, ಕೊಡಗು ಕಿತ್ತಳೆ ಜಗತ್ಪ್ರಸಿದ್ಧವಾಗಿದೆ. ಕಾಫಿಯನ್ನೂ ಬೆಳೆಯಲಾಗುತ್ತಿದೆ. ಆದರೆ ಕೇವಲ ಒಂದೇ ಬೆಳೆಯನ್ನು ನೆಚ್ಚಿಕೊಂಡರೆ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಕೃಷಿಕರು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಕಡೆಗೆ ಗಮನ ಹರಿಸಬೇಕು. ಅಣಬೆ ಅತ್ಯಂತ ಲಾಭದಾಯಕ ಬೆಳೆಯಾಗಿದ್ದು, ಗುಣಮಟ್ಟದ ಅಣಬೆ ಉತ್ಪಾದನೆಯತ್ತ ರೈತರು ಮುಖ ಮಾಡಬೇಕು ಎಂದು ಹೇಳಿದರು.

ಚೆಟ್ಟಳ್ಳಿಯ ಐಸಿಎಆರ್ - ಐಐಹೆಚ್‌ಆರ್ ಕೇಂದ್ರೀಯ ತೋಟಗಾರಿಕಾ ಪ್ರಯೋಗಾತ್ಮಕ ಕೇಂದ್ರದ ಮುಖ್ಯಸ್ಥ ಡಾ. ಬಿ.ಎಂ. ಮುರಳೀಧರ್, ತರಬೇತಿ ಸಂಯೋಜಕಿ ಡಾ. ಎಂ. ಹರಿತ ಮೋಹನ್ ಇದ್ದರು.

ಕಾರ್ಯಕ್ರಮ ಅಂಗವಾಗಿ ಸುಮಾರು 12 ವಿವಿಧ ತಳಿ ಹಾಗೂ ವಿಧಗಳ ಅಣಬೆಗಳ ಪ್ರದರ್ಶನ ಗಮನ ಸೆಳೆಯಿತು. ಅಣಬೆಯಿಂದ ತಯಾರಿಸಿದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಅದರಲ್ಲೂ ಮಹಿಳಾ ರೈತರು ಈ ಪ್ರದರ್ಶನವನ್ನು ಆಸಕ್ತಿಯಿಂದ ವೀಕ್ಷಿಸಿದರು. ಅಣಬೆ ಬೇಸಾಯ, ಉಪ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆಯೂ ಕೇಳಿ ತಿಳಿದುಕೊಳ್ಳುತ್ತಿದ್ದ ದೃಶ್ಯ ಕಂಡುಬAತು. ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾರ್ಟಿಕಲ್ಚರ್ ವತಿಯಿಂದ ಪ್ರದರ್ಶಿಸಲಾದ ವೈವಿಧ್ಯಮಯ ಅಣಬೆಗಳು ಗಮನ ಸೆಳೆದವು. ಅಣಬೆಯ ವೈಜ್ಞಾನಿಕ ಕೃಷಿ, ತಂತ್ರಜ್ಞಾನ ಮತ್ತು ಬೆಳೆ ವೈವಿಧ್ಯತೆಯ ಬಗ್ಗೆ ತಜ್ಞರಿಂದ ಉಪನ್ಯಾಸ ಹಾಗೂ ಸಂವಾದ ಏರ್ಪಡಿಸಲಾಗಿತ್ತು. ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾರ್ಟಿಕಲ್ಚರ್‌ನ ಹಿರಿಯ ವಿಜ್ಞಾನಿ ಡಾ. ಚಂದ್ರಶೇಖರ್ ಮತ್ತು ಚೆಟ್ಟಳ್ಳಿಯ ಐಸಿಎಆರ್ - ಐಐಹೆಚ್‌ಆರ್ ಕೇಂದ್ರೀಯ ತೋಟಗಾರಿಕಾ ಪ್ರಯೋಗಾತ್ಮಕ ಕೇಂದ್ರದ ತರಬೇತಿ ಸಂಯೋಜಕಿ ಡಾ. ಎಂ. ಹರಿತ ಮೋಹನ್ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರಿಗೆ ಏರ್ಪಡಿಸಿದ್ದ ಅತ್ಯುತ್ತಮ ಅಣಬೆ ಬೆಳೆಯ ಚೀಲ ಸ್ಪರ್ಧೆಯಲ್ಲಿ ಹೊದ್ದೂರುವಿನ ಸಿ.ಎಂ. ಯೋಗೇಶ್ ಪ್ರಥಮ ಮತ್ತು ಬೆಂಗಳೂರಿನ ಕವಾಟ ಆಗ್ರೋ ವೆಂರ‍್ಸ್ ದ್ವಿತೀಯ ಬಹುಮಾನ ಪಡೆದುಕೊಂಡರು. ಅಣಬೆ ಮೌಲ್ಯವರ್ಧಿತ ಉತ್ಪನ್ನ ಸ್ಪರ್ಧೆಯಲ್ಲಿ ಅಮ್ಮತ್ತಿಯ ದೀಪ್ನಾ ವಿವೇಕ್ ಎಂ. ಪ್ರಥಮ ಮತ್ತು ಕಾಫಿ ಮಂಡಳಿಯ ಪಿ.ಜೆ. ಯಕ್ಷಿತ್ ದ್ವಿತೀಯ ಬಹುಮಾನ ಪಡೆದುಕೊಂಡರು. ಇದೇ ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟದ ತಿನ್ನಬಹುದಾದ ಕಾಡುಹಣ್ಣುಗಳ ಬಗೆಗಿನ ಪುಸ್ತಕ ಮತ್ತು ಆಯಿಸ್ಟರ್ ಅಣಬೆಯ ವೈಜ್ಞಾನಿಕ ಬೇಸಾಯ ಮತ್ತು ಉತ್ಪಾದನಾ ತಂತ್ರಜ್ಞಾನದ ಬಗ್ಗೆ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು.