ಸೋಮವಾರಪೇಟೆ ಸಮೀಪದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಮಾದಕ ವಸ್ತುಗಳು ಮತ್ತು ಸೈಬರ್ ಕ್ರೈಂ ಬಗ್ಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಉದ್ಘಾಟಿಸಿದರು. ಪವಿತ್ರಾ, ಆಶಾ, ಸುನಿತಾ, ನಂದಿನಿ ಇದ್ದರು. 
ಕೊಡಗು

ಮಾದಕ ವಸ್ತುಗಳಿಂದ ಯುವ ಜನತೆ ದೂರವಿರಿ

ಪ್ರಮುಖ ಮುಖ್ಯಾಂಶಗಳು

  • ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕಿ ಎಚ್.ಆರ್.ಪವಿತ್ರಾ ಕರೆ
  • ಉಪನ್ಯಾಸ ಕಾರ್ಯಕ್ರಮ
ಸೋಮವಾರಪೇಟೆ: ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆ ತಡೆಗಟ್ಟುವಲ್ಲಿ ಸಾರ್ವಜನಿಕರು, ಪಾಲಕರು, ಯುವಜನರ ಸಹಕಾರ ಅಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕಿ ಎಚ್.ಆರ್.ಪವಿತ್ರಾ ಅಭಿಪ್ರಾಯಪಟ್ಟರು.
ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಾದಕ ವಸ್ತುಗಳನ್ನು ತೊರೆದು ಕನಸುಗಳನ್ನು ಬೆಳೆಸಿರಿ, ಒತ್ತುವ ಮೊದಲು ಯೋಚಿಸಿ, ಸೈಬರ್ ಅಪರಾಧಗಳಿಂದ ಎಚ್ಚರ ವಿಷಯದಲ್ಲಿ ಉಪನ್ಯಾಸ ನೀಡಿದರು.
ಇಂದಿನ ಯುವಜನತೆ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಉತ್ತಮ ಪ್ರಜೆಗಳಾಗಿ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕಾದರೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು. ಒಮ್ಮೆ ಮಾದಕದ್ರವ್ಯ ಸೇವನೆ ಅಥವಾ ಮಾರಾಟದಂತಹ ಚಟುವಟಿಕೆಗಳಲ್ಲಿ ತೊಡಗಿದರೆ ಅದು ಜೀವನಪರ್ಯಂತ ಕಳಂಕವಾಗಿ ಉಳಿಯುವುದಷ್ಟೇ ಅಲ್ಲದೆ ವ್ಯಕ್ತಿಯ ಭವಿಷ್ಯಕ್ಕೂ, ಕುಟುಂಬದ ಗೌರವಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಯುವಜನತೆ ತಮ್ಮ ಜೀವನದ ಗುರಿಯನ್ನು ಸ್ಪಷ್ಟವಾಗಿ ಹೊಂದಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ಮಾದಕ ವಸ್ತುಗಳಿಂದ ದೂರವಿರುವುದೇ ಉತ್ತಮ ಜೀವನದ ದಾರಿ ಎಂದು ತಿಳಿಸಿದರು.
ಡಿಜಿಟಲ್ ಯುಗದಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸಂವಹನ ಸೇರಿದಂತೆ ಅನೇಕ ವ್ಯವಹಾರಗಳು ಡಿಜಿಟಲ್ ರೂಪದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಅಜಾಗರೂಕತೆ ಕೂಡ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು ಎಂದು ಹೇಳಿದರು. ಒಂದು ತಪ್ಪು ಹೆಜ್ಜೆಯಿಂದ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಅಥವಾ ಅರಿವಿಲ್ಲದೆ ಅಪರಾಧ ಚಟುವಟಿಕೆಗಳಲ್ಲಿ ಸಿಲುಕಿಕೊಳ್ಳುವ ಸಂಭವ ಇದೆ ಎಂದು ಎಚ್.ಆರ್.ಪವಿತ್ರಾ ಎಚ್ಚರಿಸಿದರು.
ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಎಚ್ಚರಿಕೆಯಿಂದಿರಬೇಕು. ಆನ್‌ಲೈನ್ ಮಾನಹಾನಿ, ಕೃತಕ ಪ್ರಾತಿನಿಧ್ಯದಿಂದ ವಂಚನೆ, ಬೆದರಿಕೆ, ಮೋಸ ಹಾಗೂ ಇತರ ಅಪರಾಧ ಚಟುವಟಿಕೆಗಳನ್ನು ಗಣಕಯಂತ್ರಗಳು ಮತ್ತು ಅಂತರ್ಜಾಲದ ಮೂಲಕ ನಡೆಸಲಾಗುತ್ತಿದೆ. ಇಂತಹ ಅಪಾಯಕಾರಿ ಕೃತ್ಯಗಳಲ್ಲಿ ಸಿಲುಕಿಕೊಳ್ಳದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಹೇಳಿದರು.
ವೈಯಕ್ತಿಕ ಮಾಹಿತಿಗಳಾದ ಯುಪಿಐ ವಿವರಗಳು, ಒಟಿಪಿ, ಪಾಸ್‌ವರ್ಡ್ ಸೇರಿದಂತೆ ಯಾವುದೇ ರಹಸ್ಯ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಅಪರಿಚಿತರಿಂದ ಬರುವ ಲಿಂಕ್‌ಗಳನ್ನು ಒತ್ತುವುದು ಅಥವಾ ಸಂಶಯಾಸ್ಪದ ಅಪ್ಲಿಕೇಶನ್‌ಗಳನ್ನು ಬಳಸುವುದು ಅಪಾಯಕಾರಿ ಎಂದು ತಿಳಿಸಿದರು.
ಯುವಜನತೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಣದಲ್ಲಿಟ್ಟು, ಹೆಚ್ಚು ಸಮಯವನ್ನು ಪುಸ್ತಕ ಓದುವುದಕ್ಕೆ ಮೀಸಲಿಟ್ಟರೆ ಭವಿಷ್ಯ ಉಜ್ವಲವಾಗುತ್ತದೆ. ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಿಟಿಸಿಜಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಹರ್ಷ, ಇನ್ನರ್‌ವ್ಹೀಲ್ ಅಧ್ಯಕ್ಷೆ ತನ್ಮಯಿ ಪ್ರವೀಣ್, ಖಜಾಂಚಿ ಆಶಾ ಮೋಹನ್, ಐಎಸ್‌ಒ ನಂದಿನಿ ಮೋಹನ್, ಪದಾಧಿಕಾರಿಗಳಾದ ಲತಾ ನಾಗೇಶ್, ಸವಿತಾ ಉದಯ್, ದಿವ್ಯಾ ದಯಾಕರ್, ಸರಿತಾ ರಾಜೀವ್. ಉಪನ್ಯಾಸಕಿ ಸುನಿತಾ ಇತರರು ಇದ್ದರು.