ಕೊಡ್ಲಿಪೇಟೆ ಹಲಸಿನ ಮರ ಗೌರಮ್ಮ ಶಾಂತ ಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಶಿಬಿರದಲ್ಲಿ ಡಾ. ಜಮೀರ್ ಅಹಮ್ಮದ್ ಮಾತನಾಡಿದರು.
ಶನಿವಾರಸಂತೆ: ಯುವ ಜನತೆಯಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಬದುಕಿನ ಸಾರ್ಥಕತೆಯ ಮೌಲ್ಯಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಡಾ. ಜಮೀರ್ ಅಹಮದ್ ಅವರು ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆಯ ಹಲಸಿನ ಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕೊಡ್ಲಿಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿ ಯುವ ಜನತೆ; ಅಂದು-ಇಂದು ಎಂಬ ವಿಷಯದ ಕುರಿತು ಮಾತನಾಡಿದ ಅವರು, ಸಂಬಂಧಗಳ ಮೌಲ್ಯ, ವಿಧೇಯತೆ, ವಿನಯತೆ, ಪ್ರೀತಿ ತುಂಬಿದ ಮಾತುಗಳು ಮರೆಯಾಗುತ್ತಿವೆ. ಗುರು-ಹಿರಿಯರ ಹಾಗೂ ಪೋಷಕರ ಬಗೆಗೆ ನಿರ್ಲಕ್ಷ್ಯ ಮನೋಭಾವ ಹೆಚ್ಚಾಗುತ್ತಿದೆ. ಆಕರ್ಷಕ ಬದುಕಿನ ಮೋಹದಲ್ಲಿ ಎಲ್ಲವನ್ನೂ ಮರೆತು ಹೋಗುವಂತಹ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿದೆ. ಇದರಿಂದ ಹೊರಬರುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಕೊಡ್ಲಿಪೇಟೆಯ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಶಿವಪ್ರಸಾದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿದ್ದೇಶ್, ಸತೀಶ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಯೋಗೇಂದ್ರ, ಸಹ ಶಿಬಿರಾಧಿಕಾರಿ ಯೋಗಿತಾ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.