ಸ್ವಾತಂತ್ರ್ಯ ಹೋರಾಟಗಾರ ದಿ.ಪೂಜಾರಿರ ರಾಮಪ್ಪ ಅವರ ಹೆಸರಿನ ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ ಮಾತನಾಡಿದರು. ಪೂಜಾರಿರ ಬೆಳ್ಯಪ್ಪ, ತೆನ್ನಿರ ಮೈನಾ, ರಕ್ಷಿತ್, ನವೀನ್ ಕುಶಾಲಪ್ಪ ಇತರರಿದ್ದರು. 
ಕೊಡಗು

ಇತಿಹಾಸ ಮರೆತು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ

ಪ್ರಮುಖ ಮುಖ್ಯಾಂಶಗಳು

  • ಇತಿಹಾಸ ಮರೆತು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ
ಮಡಿಕೇರಿ: ಇತಿಹಾಸವನ್ನು ಮರೆತು ಇತಿಹಾಸ ನಿರ್ಮಿಸುವುದು ಅಸಾಧ್ಯ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಎಂದರು.
ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಪೂಜಾರಿರ ರಾಮಪ್ಪ ಅವರ ಹೆಸರಿನಲ್ಲಿ ಮೇಕೇರಿ ಬಿಳಿಗೇರಿ, ಅರ್ವತ್ತೋಕ್ಲು ಲಿಂಕ್ ರಸ್ತೆಗೆ ನಾಮಕರಣ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಅನೇಕ ಮಹನೀಯರು ತಮ್ಮ ಬದುಕನ್ನು ತ್ಯಾಗ ಮಾಡಿ ಪಾಲ್ಗೊಳ್ಳುವ ಮೂಲಕ ತಮ್ಮ ದೇಶ ಪ್ರೇಮದ ಬದ್ದತೆಯನ್ನು ಮೆರೆದಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ದಿವಂಗತ ಪೂಜಾರಿ ರಾಮಪ್ಪ ಅವರು ಒಬ್ಬರಾಗಿದ್ದು, ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಂದಿಸುವ ಅವಕಾಶ ದೊರಕಿದ್ದು ಸಂತಸದ ಕ್ಷಣವಾಗಿದೆ ಎಂದು ಹೇಳಿದರು.
ಕೊಡಗು ಗಡಿ ಭಾಗವಾದ್ದರಿಂದ ಇತಿಹಾಸಕಾರರು ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ದಾಖಲೀಖರಿಸಲು ಆಸಕ್ತಿ ತೋರದೇ ಇದ್ದಿರುವ ಸಾಧ್ಯತೆ ಇದೆ. ಇಂದಿನ ಪೀಳಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಕೊಡಗಿನ ಮಹಾನ್ ವ್ಯಕ್ತಿಗಳ ಬಗ್ಗೆ ಪರಿಚಯಿಸುವಂತಹ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ತನ್ನ ಸಂಸಾರ, ಸಂಬಂಧಗಳು ಮತ್ತು ಬದುಕು ದೇಶಕ್ಕಿಂತ ದೊಡ್ಡದಲ್ಲಾ ಎಂಬ ಧೃಡ ಸಂಕಲ್ಪದೊಂದಿಗೆ ಪೂಜಾರಿರ ರಾಮಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಕಠಿಣ ಶಿಕ್ಷೆ ಅನುಭವಿಸಿ ಸ್ವಾತಂತ್ರ್ಯ ನಂತರವೂ ಅಪ್ಪಟ ಗಾಂಧಿವಾಧಿಯಾಗಿ ಗಾಂಧಿಯವರ ಆದರ್ಶಗಳೊಂದಿಗೆ ಬದುಕಿ ಮುಂದಿನ ಪೀಳಿಗೆಗೆ ಆದರ್ಶದ ಮಾರ್ಗವನ್ನು ತೋರಿದ ಪೂಜಾರಿರ ರಾಮಪ್ಪ ನವರ ಬದುಕು ಅವೀಸ್ಮರಣೀಯವಾದದ್ದು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮಪ್ಪ ಟ್ರಸ್ಟ್ ಅಧ್ಯಕ್ಷ ಪೂಜಾರಿರ ಬೆಳ್ಯಪ್ಪ ಮಾತನಾಡಿ, ಈ ಸುದಿನಕ್ಕಾಗಿ ಕಳೆದ ೨೯ ವರ್ಷಗಳಿಂದ ಟ್ರಸ್ಟ್ ಸದಸ್ಯರು ಪ್ರಯತ್ನಪಟ್ಟಿದ್ದರು. ಶಾಸಕರಾದ ಪೊನ್ನಣ್ಣ ಅವರ ಸಹಕಾರದಿಂದ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಪೂಜಾರಿರ ರಕ್ಷಿತ್, ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಪೂಜಾರಿರ ಕುಟುಂಬಸ್ಥರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಹಾಗೂ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಡಿ.ಸಿ.ಸಿ ಸದಸ್ಯ ಭೀಷ್ಮ ಮಾದಪ್ಪ, ಅರೆಭಾಷೆ ಗೌಡ ಅಕಾಡಮಿ ಸ್ಥಾಪಕ ಅಧ್ಯಕ್ಷ ತುಮ್ತಜೆ ಗಣೇಶ್, ಪ್ರಮುಖರಾದ ಪೂಜಾರಿರ ಮಾದಪ್ಪ, ಪೂಜಾರಿರ ನಾಣಯ್ಯ, ಪೂಜಾರಿರ ಜಗದೀಶ್, ಬಾಳಾಡಿ ಪ್ರತಾಪ್, ಅಂಬೇಕಲ್ ನವೀನ್ ಕುಶಾಲಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಪೂಜಾರಿರ ಕುಟುಂಬಸ್ಥರು, ಮೇಕೇರಿ, ಬಿಳಿಗೇರಿ ಮತ್ತು ಅರ್ವತ್ತೋಕ್ಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.