೧೨ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಜಾಥಾಕ್ಕೆ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಅವರು ಚಾಲನೆ ನೀಡಿದರು. ಡಾ.ಜಿ.ಶೈಲಜಾ, ಶ್ರೀನಾಥ್, ಡಾ.ರಾಮಚಂದ್ರ ಕಾಮತ್ ಇತರರಿದ್ದರು. 
ಕೊಡಗು

ಯೋಗ ದಿನಾಚರಣೆ ಪ್ರಯುಕ್ತ ಜಾಥಾ

ಆದರ್ಶ್. ಎಂ.ಕೆ.
ಮಡಿಕೇರಿ: ೧೨ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಂಗಳವಾರ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಕೊಡಗು ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ, ಯೋಗ ಒಕ್ಕೂಟ, ಮಡಿಕೇರಿ, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಪೋಲೀಸ್ ಇಲಾಖೆರವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಿಂದ ಹಳೆಯ ಖಾಸಗಿ ಬಸ್ ನಿಲ್ದಾಣ ಮೂಲಕ ಗಾಂಧಿ ಮೈದಾನದವರೆಗೆ ಜಾಥಾ ನಡೆಯಿತು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಅವರು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಜಾಥಾಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು ೪೦೦ ಜನ ಭಾಗವಹಿಸಿದ್ದರು. ನಗರ ಪೊಲೀಸ್ ಠಾಣೆ ಬಳಿ ಯೋಗ ಪ್ರದರ್ಶನ ನಡೆಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ.ಶೈಲಜಾ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮ ಉಪಯುಕ್ತವಾಗಿದೆ. ಯೋಗವು ಕೇವಲ ವ್ಯಾಯಾಮವಲ್ಲ. ಬದಲಿಗೆ ಒತ್ತಡವನ್ನು ಕಡಿಮೆ ಮಾಡಿ ದೇಹ ಮತ್ತು ಮನಸ್ಸಿಗೆ ಸಮತೋಲನ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸಮತೋಲನಗೊಳಿಸುವಲ್ಲಿ ಸಹಕಾರಿಯಾಗಿದೆ. ಇದು ಉಸಿರಾಟದ ನಿಯಂತ್ರಣ, ಆಸನಗಳು ಮತ್ತು ಧ್ಯಾನದ ಮೂಲಕ ಒತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ನವ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ಆರೋಗ್ಯ ಗುಣಮಟ್ಟ ಸುಧಾರಿಸಲಿದೆ ಎಂದು ಡಾ.ಶೈಲಜಾ ಅವರು ಮಾಹಿತಿ ನೀಡಿದರು.
ಯೋಗಾಭ್ಯಾಸದಿಂದ ದೈಹಿಕ ಆರೋಗ್ಯ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಚೆನ್ನಾಗಿರಲಿದೆ. ಜೀವನ ಶೈಲಿ ಸುಧಾರಣೆಯಾಗಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಶ್ರೀನಾಥ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ರಾಮಚಂದ್ರ ಕಾಮತ್, ಶಾಲಾ ಶಿಕ್ಷಣ ಇಲಾಖೆ, ಡಿ.ಪಿ.ಓ ಶ್ರೀನಿವಾಸ, ಸೌಟ್ಸ್ ಮತ್ತು ಗೈಡ್ಸ್‌ನ ಮುಖ್ಯಸ್ಥರಾದ ಬೇಬಿ ಮ್ಯಾಥ್ಯೂ, ಯೋಗ ಒಕ್ಕೂಟದ ಮಹೇಶ್ ಕುಮಾರ್, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ವೈದ್ಯಾಧಿಕಾರಿ ಡಾ.ಅರುಣ್.ಪಿ.ಜಿ ಉಪಸ್ಥಿತರಿದ್ದರು.