ಸೋಮವಾರಪೇಟೆಯಲ್ಲಿ ನಡೆಯುವ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ ಆತಿಥೇಯ ಯಿಫಾ ತಂಡದ ಜರ್ಸಿಗಳನ್ನು ಶಾಸಕ ಡಾ.ಮಂತರ್‌ಗೌಡ ಶಾಸಕರ ಕಚೇರಿ ಆವರಣದಲ್ಲಿ ಬಿಡುಗಡೆ ಮಾಡಿದರು. ಶ್ರೀನಿಧಿ, ಹರ್ಷಿತ್, ಸಜನ್ ಇತರರಿದ್ದರು.
ಸೋಮವಾರಪೇಟೆ: ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮೇ 7 ರಿಂದ 10ರವರೆಗೆ ಆಯೋಜಿಸಿರುವ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ ಆತಿಥೇಯ ಯಿಫಾ ತಂಡದ ಜರ್ಸಿಗಳನ್ನು ಶಾಸಕ ಡಾ.ಮಂತರ್‌ಗೌಡ ಶಾಸಕರ ಕಚೇರಿ ಆವರಣದಲ್ಲಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಶಾಸಕರು, ಯುವ ಜನಾಂಗಕ್ಕೆ ಹಾಕಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯಿಫಾ ಸಂಘಟನೆ ಇದೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಒಳಗೊಂಡಂತೆ ಹಾಕಿ ಪಂದ್ಯಾವಳಿ ಆಯೋಜಿಸಿದ್ದು, ಪಂದ್ಯಾವಳಿಯ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಹಾಕಿ ಕ್ರೀಡೆಗಳು ನಿರಂತರವಾಗಿ ನಡೆಯಬೇಕು. ಎಲ್ಲ ಜಾತಿ, ಜನಾಂಗ, ಪಕ್ಷದವರನ್ನು ಒಂದುಗೂಡಿಸಲು ಕ್ರೀಡೆಯಿಂದ ಮಾತ್ರ ಸಾಧ್ಯ. ಪ್ರಸ್ತುತ ಯುವಕರು ದುಶ್ವಟಗಳಿಗೆ ಒಳಗಾಗಿ ಜೀವನವನ್ನು ನರಕಸದೃಶ ಮಾಡಿಕೊಳ್ಳುತ್ತಿದ್ದಾರೆ. ಅಂತಹವರು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದುಶ್ಚಟಗಳಿಂದ ಹೊರಬಂದು ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಕ್ರೀಡೆಯಿಂದ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬಹುದು ಎಂದರು.
ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕೊಡಗಿನಲ್ಲಿ 25 ವರ್ಷಗಳ ನಂತರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ತಂಡಗಳಾದ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಒಆರ್‌ಸಿ, ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸೌತರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸುತ್ತಿವೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ 2 ಲಕ್ಷ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 1 ಲಕ್ಷ ರೂ.ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ರೂ.ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲೂ ಪ್ರಶಸ್ತಿ ವಿತರಿಸಲಾಗುವುದು ಎಂದರು.
ಯಿಫಾ ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ಪ್ರಣವ್ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ ಇದ್ದರು.