ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ಆಚರಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೆಸ್ಕ್ ಸಿಬ್ಬಂದಿ ವರ್ಗ. ಶರಣಮ್ಮ ಎಸ್. ಜಂಗಿನ, ಎಂ. ರಾಮಚಂದ್ರ, ಕೆ. ಎಚ್. ಪ್ರಭಾವತಿ, ಆರ್.ಪಿ. ನೀತಾ ಮತ್ತಿತರರು ಇದ್ದರು.
ಕರ್ತವ್ಯ ನಿರತ ಮಹಿಳೆಯರಿಗೆ ಎಷ್ಟೇ ಕಾರ್ಯ ಒತ್ತಡಗಳಿದ್ದರೂ ಕೌಟುಂಬಿಕ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿಸಬಾರದು ಎಂದು ಸೆಸ್ಕ್ ತಾಂತ್ರಿಕ ನಿರ್ದೇಶಕಿ ಶರಣಮ್ಮ ಎಸ್. ಜಂಗಿನ ಹೇಳಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ಇಲ್ಲಿನ ಗಾಂಧಿಭವನದಲ್ಲಿ ಶನಿವಾರ ಆಚರಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಮಹಿಳೆಯರು ಎಲ್ಲಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾಲು ಸಾಕಷ್ಟಿದೆ. ಕರ್ತವ್ಯ ನಿರತ ಮಹಿಳೆಯರು ತಮ್ಮ ಕಾರ್ಯ ಒತ್ತಡಗಳ ಮಧ್ಯೆಯೂ ಕುಟುಂಬ ನಿರ್ವಹಣೆಯನ್ನು ಮರೆಯಬಾರದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಸೆಸ್ಕ್ ವಿಭಾಗಿಯ ಕಚೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ರಾಮಚಂದ್ರ ಮಾತನಾಡಿ ಸ್ತ್ರೀ ಮತ್ತು ಪುರುಷ ಸಮಾಜದ ಎರಡು ಕಣ್ಣುಗಳಿದ್ದಂತೆ. ಪುರುಷ ಪ್ರಧಾನ ಸಮಾಜ ಎಂಬುದು ಪ್ರಸಕ್ತ ಕಾಲಘಟ್ಟಕ್ಕೆ ಹೊಂದಿಕೆಯಾಗುವುದಿಲ್ಲ. ಇಂದು ಮಹಿಳೆಯರು ಸಾಮಾಜಿಕವಾಗಿ ಎಷ್ಟೇ ಮುಂದುವರಿದರೂ ಅವರಿಗೆ ಸಲ್ಲಬೇಕಾದ ಗೌರವದಲ್ಲಿ ಯಾವುದೇ ರಾಜಿ ಬೇಡ. ಮಹಿಳೆಯರನ್ನು ಸದಾ ವಿಶೇಷ ಗೌರವದಿಂದಲೇ ಕಾಣಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಡಳಿತಾಧಿಕಾರಿ, ಮಡಿಕೇರಿಯ ಸಖಿ ಒನ್ ಸ್ಟಾಪ್ ಕೇಂದ್ರದ ಕೆ. ಎಚ್. ಪ್ರಭಾವತಿ ಮಾತನಾಡಿ ಮಹಿಳೆಯರು ಅಬಲೆಯಲ್ಲ, ಸಬಲೆಯರು ಎಂದು ಸಾಬೀತಾಗಿದೆ. ಆದರೆ ಸಮಾಜ ಎಷ್ಟೇ ಮುಂದುವರಿದರೂ ಮಹಿಳೆಯರು ಇಂದಿಗೂ ಬೇರೆ ಬೇರೆ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಿಟ್ಟುಕೊಳ್ಳಬಾರದು. ಪೊಲೀಸ್ ಇಲಾಖೆಗೆ ಮಾತ್ರ ದೂರು ಸಲ್ಲಿಸಬಹುದು ಎಂದು ತಿಳಿದುಕೊಳ್ಳಬಾರದು. ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲೆಂದೇ ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಈ ಸೌಲಭ್ಯವನ್ನು ಅರ್ಹ ಸಂತ್ರಸ್ತರು ಬಳಸಿಕೊಳ್ಳಬೇಕು. ಮಹಿಳೆಯರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು ಎಂದರು.
ಸೆಸ್ಕ್ ವಿರಾಜಪೇಟೆ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆರ್.ಪಿ. ನೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಬೇರೆ ಬೇರೆ ರೀತಿಯ ಒತ್ತಡದಿಂದಾಗಿ ಆರೋಗ್ಯ ಕಡೆಗೆ ಗಮನಹರಿಸುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಏನೇ ಇದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರು ಮೊದಲ ಆದ್ಯತೆ ನೀಡಬೇಕು. ಆರೋಗ್ಯ ಸರಿ ಇದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ ಎಂಬುದನ್ನು ಮಹಿಳಾ ಸಿಬ್ಬಂದಿ ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದರು.
ವಿಭಾಗಿಯ ಲೆಕ್ಕಾಧಿಕಾರಿ ಎಂ.ಎಸ್. ಸಂತೋಷ್ ಕುಮಾರ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ವಿನಯ್ ಕುಮಾರ್, ನಿಗಮದ ಕೊಡಗು ವೃತ್ತದ ಕೆ.ಎಂ. ದಿಲೀಪ್, ಕ. ವಿ. ಪ್ರ. ನಿ. ನಿ. ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮೈಸೂರಿನ ಕೆ.ಬಿ. ಕೃಷ್ಣರಾಜ್, ಕ.ವಿ.ಪ್ರ.ನಿ.ನಿ. ನೌಕರರ ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷ ಮಡಿಕೇರಿಯ ಶಿವಾನಂದ ಶೆಟ್ಟಿ, ಪದ್ಮಶ್ರೀ ನಾಯ್ಕ್, ಹೆಚ್.ಎಂ. ಮೇಘನಾ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.