ಮರದಿದ್ದ ಬಿದ್ದು ಮೃತಪಟ್ಟ ಕಾರ್ಮಿಕ ರವಿ.
ಪೊನ್ನಂಪೇಟೆ: ವಿರಾಜಪೇಟೆ ನಲ್ವತೊಕ್ಲು ಗ್ರಾಮದಲ್ಲಿ ಗುರುವಾರ ಕಾಫಿ ತೋಟ ಒಂದರಲ್ಲಿ ಮರ ಕಪಾತ್ ಮಾಡುತ್ತಿದ್ದ ವೇಳೆ ಕಾರ್ಮಿಕ ಬಿದ್ದು ಸಾವಿಗೀಡಾಗಿದ್ದಾರೆ.
ಪೊನ್ನಂಪೇಟೆ ತಾಲೂಕು ಜೋಡುಬೀಟಿ ನಿವಾಸಿ ಜೇನುಕುರುಬರ ಮಧು ಅವರ ಪುತ್ರ ಜೆ.ಎಂ. ರವಿ (32) ಮೃತರು.
ಮೃತ ಕಾರ್ಮಿಕ ರವಿ ಗುರುವಾರ ಬೆಳಗ್ಗೆ ಮನೆಯಿಂದ ಚೋಕಂಡಳ್ಳಿ ನಲ್ವತೊಕ್ಲು ಗ್ರಾಮದ ಮುಸ್ತಫಾ ಅವರ ಕಾಫಿ ತೋಟಕ್ಕೆ ಕಪಾತ್ ಕೆಲಸಕ್ಕೆ ಬಂದಿದ್ದ. ಕಾರ್ಮಿಕ ರವಿಗೆ ಮೂರ್ಛೆ ಕಾಯಿಲೆ ಇತ್ತು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಮೃತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ಗುರುವಾರ ಮಧ್ಯಾಹ್ನ ಮರವನ್ನು ಕಪಾತ್ ಮಾಡುತಿದ್ದಾಗ ಮೂರ್ಛೆ ರೋಗ ಉಲ್ಬಣಗೊಂಡು ಮರದಿಂದ ನೆಲಕ್ಕೆ ಉರುಳಿದ್ದಾನೆ. ತಕ್ಷಣವೇ ಸನಿಹದಲ್ಲಿದ್ದ ಇತರ ಕಾರ್ಮಿಕರು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಿಯನ್ನು ಕರೆತಂದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ. ಮೃತನ ಪತ್ನಿ ಜ್ಯೋತಿ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.