ಬೀಟಿಕಟ್ಟೆ -ಶುಂಠಿ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಗ್ರಾಮಾಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಎಸ್.ಆರ್. ಚಿನ್ನಪ್ಪ, ಖಜಾಂಜಿ ಎಸ್.ಎಂ. ಗಿರೀಶ್, ಸಲಹೆಗಾರಾದ ಎಸ್.ಬಿ. ನಾಗರಾಜು, ವಿ.ಪಾಂಡು ಮತ್ತು ಗ್ರಾಮಸ್ಥರು ಹಾಜರಿದ್ದರು.
ಸೋಮವಾರಪೇಟೆ: ಶುಂಠಿ ಮಂಗಳೂರು ಗ್ರಾಮಸ್ಥರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೀಟಿಕಟ್ಟೆ -ಶುಂಠಿ ರಸ್ತೆಯನ್ನು ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಿದರು. ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಮಾಡುವ 11 ಕೆ.ವಿ. ವಿದ್ಯುತ್ ತಂತಿಗಳ ಮೇಲೆ ಬಾಗಿದ್ದ ಮರಗಳನ್ನು ತೆರವುಗೊಳಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಯಿತು. ಇದರಿಂದ ವಿದ್ಯುತ್ ವ್ಯತ್ಯಯ ಮತ್ತು ಅಪಾಯ ಸಂಭವಿಸುವ ಸಾಧ್ಯತೆಗಳನ್ನು ನಿವಾರಿಸಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಕೆ.ವಿನೋದ್, ಗ್ರಾಮಸ್ಥರು ಪ್ರತಿವರ್ಷ ಇದೇ ರೀತಿಯಾಗಿ ಒಗ್ಗಟ್ಟಿನಿಂದ ಶ್ರಮದಾನ ಕಾರ್ಯಗಳನ್ನು ನಡೆಸುತ್ತಿರುವುದು ಮಾದರಿಯಾಗಿದೆ ಎಂದರು. ನಾಗರಿಕರು ಸ್ವಂತ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವಿಕೆ, ಮಳೆ ನೀರು ಹರಿಯಲು ರಸ್ತೆ ಬದಿ ಕಾಲುವೆ ನಿರ್ಮಾಣ, ಕಸ ತೆರವು ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸುವ ಮೂಲಕ ಗಮನಸೆಳೆಯುತ್ತಿದ್ದಾರೆ. ಯಾವುದೇ ಕೆಲಸ ಸ್ಥಳೀಯ ಸಂಸ್ಥೆಗಳಿಂದ ಆಗಿಲ್ಲ ಎಂದು ದೂರುವುದಕ್ಕಿಂತ ಸಾರ್ವಜನಿಕರ ಅನುಕೂಲಕ್ಕಾಗಿ ಈ ರೀತಿ ಎಲ್ಲರೂ ಒಗ್ಗೂಡಿ ಶ್ರಮದಾನ ಮಾಡುತ್ತಿರುವುದು ಗ್ರಾಮಾಭಿವೃದ್ಧಿಗೆ ಪೂರಕವಾಗಿದೆ ಎಂದರು. ಗ್ರಾಮಾಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಎಸ್.ಆರ್. ಚಿನ್ನಪ್ಪ, ಖಜಾಂಜಿ ಎಸ್.ಎಂ. ಗಿರೀಶ್, ಸಲಹೆಗಾರಾದ ಎಸ್.ಬಿ. ನಾಗರಾಜು, ವಿ.ಪಾಂಡು ಮತ್ತು ಗ್ರಾಮಸ್ಥರು ಹಾಜರಿದ್ದರು.