ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ರುಬೀನಾ.ಎಂ.ಎ ಅವರ ಚೊಚ್ಚಲ ಕೃತಿ ಕಣ್ಣಾ ಮುಚ್ಚಾಲೆ ಪುಸ್ತಕವನ್ನು ಶಾಸಕ ಡಾ.ಮಂತರ್ ಗೌಡ ಅವರು ಬಿಡುಗಡೆಗೊಳಿಸಿದರು. ಡಾ.ವಾಮನ್ ರಾವ್ ಬೇಕಲ್, ಕೆ.ಆನಂದ ತೀರ್ಥ, ಬೊಳ್ಳಜಿರ ಬಿ.ಅಯ್ಯಪ್ಪ ಇತರರಿದ್ದರು.
- ಮಹಿಳಾ ಬರಹಗಾರರಿಗೆ ಪ್ರೋತ್ಸಾಹ ಅಗತ್ಯ
- ರುಬೀನಾ ರಚಿತ ಕಣ್ಣಾ ಮುಚ್ಚಾಲೆ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ
ಮಡಿಕೇರಿ: ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದು, ಪ್ರತಿಯೊಬ್ಬರು ಪುಸ್ತಕ ಓದುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಕರೆ ನೀಡಿದರು.
ಕನ್ನಡ ಭವನ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ರುಬೀನಾ.ಎಂ.ಎ ಅವರ ಚೊಚ್ಚಲ ಕೃತಿ ಕಣ್ಣಾ ಮುಚ್ಚಾಲೆ ಬಿಡುಗಡೆಗೊಳಿಸಿ ಶಾಸಕರು ಮಾತನಾಡಿದರು.
ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿದ್ದರು. ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹಿಂದೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಿತ್ತು. ಇಂದು ಅತಿಯಾದ ತಂತ್ರಜ್ಞಾನದ ಬಳಕೆಯಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಆಸಕ್ತಿ ಹೊಂದಬೇಕು ಎಂದರು.
ಪುಸ್ತಕ ರಚನೆ ಕಷ್ಟಕರ ಕೆಲಸ, ಆದರೂ ಸವಾಲಿನ ನಡುವೆ ಮಹಿಳಾ ಪ್ರಧಾನವಾದ ಪುಸ್ತಕವನ್ನು ರುಬೀನಾ ಅವರು ಹೊರತಂದಿದ್ದು, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪುಸ್ತಕ ಪ್ರಚಾರಕ್ಕೆ ತಾನು ಸಹಕಾರ ನೀಡುವುದಾಗಿ ಇದೇ ಸಂದರ್ಭ ಶಾಸಕರು ಭರವಸೆ ನೀಡಿದರು.
ಕನ್ನಡ ಭವನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಮಾತನಾಡಿ, ಅಕ್ಷರ ರೂಪದಲ್ಲಿರುವ ಪುಸ್ತಕಗಳಿಗೆ ಎಂದೂ ಸಾವಿಲ್ಲ. ಪ್ರಪಂಚದಲ್ಲಿ ಸಾಕಷ್ಟು ಪುರಾತನ ಕೋಟೆ ಕೊತ್ತಲಗಳು ನಶಿಸಿ ಹೋಗಿವೆ. ಆದರೆ, ವೇದಶಾಸ್ತ್ರ, ಉಪನಿಷತ್ತು, ಬೈಬಲ್, ಕುರಾನ್‌ಗಳ ಮೂಲಕ ಅಕ್ಷರ ಕ್ರೋಢೀಕರಣ ಉಳಿದುಕೊಂಡಿದೆ. ಆದ್ದರಿಂದ ಬರಹಗಾರರು ತಮ್ಮ ಆಶಯಗಳನ್ನು ಅಕ್ಷರ ರೂಪದಲ್ಲಿ ಉಳಿಸಿ, ಮುಂದಿನ ತಲೆಮಾರಿಗೆ ದಾರಿ ದೀಪವಾಗಬೇಕು ಎಂದರು.
ಹಿರಿಯ ಸಾಹಿತಿ ಭಾರಧ್ವಾಜ್ ಕೆ.ಆನಂದ ತೀರ್ಥ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಬೆಂಬಲ ನೀಡಬೇಕು. ಸದಾ ಸವಾಲುಗಳ ನಡುವೆ ಬದುಕುವ ಮಹಿಳೆಯರು ಪುಸ್ತಕಗಳನ್ನು ಓದುವ ಮೂಲಕ ಜೀವನ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಪಸ್ತುತ ದಿನಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಪುಸ್ತಕದ ರೂಪದಲ್ಲಿ ಸಾಹಿತ್ಯವನ್ನು ಓದುವವರ ಸಂಖ್ಯೆ ಕ್ಷೀಣಿಸಿದೆ. ಶುಭ ಸಮಾರಂಭಗಳಲ್ಲಿ ಪ್ರತಿಯೊಬ್ಬರು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಓದಲು ಉತ್ತೇಜನವನ್ನು ನೀಡಬೇಕು ಮತ್ತು ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಣ್ಣಾ ಮುಚ್ಚಾಲೆ ಪುಸ್ತಕದ ಲೇಖಕಿ ರುಬೀನಾ.ಎಂ.ಎ ಮಾತನಾಡಿ, ಬಡತನ, ಹಠ ಮತ್ತು ಸಮಾಜಸೇವೆ ತಾವು ಬರಹಗಾರರಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಹೆಣ್ಣು ಮಕ್ಕಳ ಬಗ್ಗೆ ಟೀಕೆ ಟಿಪ್ಪಣಿಗಳು ಸಹಜವಾಗಿದ್ದು, ಅದನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಮರ್ಕರ ಪೋಸ್ಟ್ ಪತ್ರಿಕೆ ಸಂಪಾದಕ ಜೈರೋಸ್ ಥೋಮಸ್ ಅಲೆಕ್ಸಾಂಡರ್ ಮಾತನಾಡಿದರು.
ಅಂತರರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಫರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಮಿಂಚಿದ ಸಿದ್ದಾಪುರದ ರಿಮ್ಸಾ ಖಾನಂ.ಎಂ.ಆರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಭವನ ಮತ್ತು ಗೆಳೆಯರ ಬಳಗದಿಂದ ಲೇಖಕಿ ರುಬೀನಾ.ಎಂ.ಎ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಹಾಗೂ ಪುಸ್ತಕದ ಪುಟ ವಿನ್ಯಾಸಗೊಳಿಸಿದ ಕೆ.ಎಂ.ವಿನೋದ್ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಗಾಯತ್ರಿ ಚೆರಿಯಮನೆ ಪ್ರಾರ್ಥಿಸಿದರೆ, ಹರ್ಷಿತಾ ಶೆಟ್ಟಿ ಸ್ವಾಗತಿಸಿ, ಕಿಶೋರ್ ರೈ ನಿರೂಪಿಸಿದರು, ಬೊಟ್ಟೋಳಂಡ ನಿವ್ಯ ಕಾವೇರಮ್ಮ ವಂದಿಸಿದರು.