ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಅರಿವು ಕಾರ್ಯಕ್ರಮ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಉದ್ಘಾಟಿಸಿದರು. ವೀಣಾ ಅಚ್ಚಯ್ಯ, ಪ್ರಸನ್ನ ಕುಮಾರ್, ಯಶೋಧಾ ಪ್ರಕಾಶ್, ಬಿ.ಕೆ.ರವೀಂದ್ರ ರೈ ಇತರರಿದ್ದರು. 
ಕೊಡಗು

ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಲಿ

ಪ್ರಮುಖ ಮುಖ್ಯಾಂಶಗಳು

  • Women health
ಮಡಿಕೇರಿ: ಸಮಾಜ ಸ್ವಸ್ಥವಾಗಿಡುವಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಸಲಹೆ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಘಟಕ ವತಿಯಿಂದ ನಗರದ ರೆಡ್‌ಬ್ರಿಕ್ಸ್ ಇನ್ ಸತ್ಕಾರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಅರಿವು ಕಾರ್ಯಕ್ರಮ, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ. ಆದ್ದರಿಂದ ಒಂದು ಕುಟುಂಬ ಸಮರ್ಪಕವಾಗಿ ನಡೆಯಬೇಕಿದ್ದಲ್ಲಿ ತಾಯಿ ಆರೋಗ್ಯ ಪೂರ್ಣವಾಗಿರಬೇಕು. ಇದರಿಂದ ಮಕ್ಕಳು ಹಾಗೂ ಕುಟುಂಬದ ನಿರ್ವಹಣೆ ಸುಗಮವಾಗಿ ಸಾಗಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಡೀ ಪ್ರಪಂಚಕ್ಕೆ ಜೀವಶಕ್ತಿ, ಆತ್ಮಶಕ್ತಿ ಹೆಣ್ಣು ಎಂದರೆ ತಪ್ಪಾಗಲಾರದು. ಸೃಷ್ಟಿಗೆ ಮೂಲ ಕಾರಣಕರ್ತಳು ಹೆಣ್ಣು. ಇಂದು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆತ್ಮಸಾಕ್ಷಿ ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ಕುಟುಂಬದಲ್ಲಿ ಧೈರ್ಯ ತುಂಬುವವರು ಮಹಿಳೆಯರು ಎಂದರೆ ಅತಿಶಯೋಕ್ತಿಯಲ್ಲ ಎಂದು ನುಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಪುರಾತನ ಕಾಲದಿಂದಲೂ ಹೆಣ್ಣಿಗೆ ತನ್ನದೇ ಆದ ಮಹತ್ತರ ಸ್ಥಾನವಿದೆ. ಮಹಿಳೆಯರು ರಾಜಕೀಯ, ಕ್ರೀಡೆ, ಸಿನಿಮಾ, ಗಗನಯಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ಇದಕ್ಕೆ ಕುಟುಂಬ ಹಾಗೂ ಎಲ್ಲರು ಸಹಕಾರ ನೀಡಿದ್ದಾರೆ. ಸರ್ಕಾರ ಮಹಿಳೆಯರಿಗೆ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ಸಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿನದ್ದಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಇದ್ದು, ಇದರಿಂದ ಸಮಾನತೆ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ ಕೊಟ್ಟುಕೊತ್ತೀರ ಯಶೋದಾ ಪ್ರಕಾಶ್ ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆಯ ಜತೆಗೆ ಕಚೇರಿಯಲ್ಲೂ ಕೆಲಸ ಮಾಡಿಕೊಂಡು ಜೀವನ ನಿಭಾಯಿಸುವುದು ದೊಡ್ಡ ಸಾಧನೆ. ಮಹಿಳೆಯರು ಸಂಬಳ ಇರದೆ ಇಡೀ ಕುಟುಂಬವನ್ನು ಉತ್ತಮವಾಗಿ ಸಾಗಿಸುವಲ್ಲಿ ಪ್ರಯತ್ನಿಸುತ್ತಾರೆ. ಹಾಗಾಗಿ ಹೆಣ್ಣನ್ನು ಗೌರವಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಅರಿವು ಕಾರ್ಯಕ್ರಮ ಏರ್ಪಡಿಸಿರುವುದು ವಿಶೇಷವಾಗಿದೆ ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 74 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರೆಡ್‌ಕ್ರಾಸ್ ಸಂಸ್ಥೆಯು ಪ್ರಾಕೃತಿಕ ವಿಕೋಪ, ಲಾಕ್‌ಡೌನ್ ಸೇರಿದಂತೆ ಅಗತ್ಯ ಇದ್ದಂತಹ ಸಂದರ್ಭದಲ್ಲಿ ತುರ್ತು ಕಾರ್ಯ ಪ್ರವೃತ್ತವಾಗಿ ಜನರ ಸೇವೆ ಮಾಡುತ್ತಾ ಬಂದಿದೆ ಎಂದರು.
ರೆಡ್‌ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ಕಾರ್ಯಕ್ರಮದಲ್ಲಿ 460 ಮಹಿಳೆಯರು ಪಾಲ್ಗೊಂಡಿರುವುದು ರೆಡ್‌ಕ್ರಾಸ್ ಪ್ರಯತ್ನಕ್ಕೆ ಸಂದ ಫಲವಾಗಿದೆ ಎಂದು ತಿಳಿಸಿದರು.
ರಾಷ್ಟ್ರ ಪ್ರಶಸ್ತಿ ಪಡೆದ ಕೊಟ್ಟುಕೊತ್ತೀರ ಯಶೋಧಾ ಪ್ರಕಾಶ್ ಅವರನ್ನು ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಮಡಿಕೇರಿ ತಾಲೂಕಿನ 15 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸನ್ಮಾನಿಸಲಾಯಿತು. ವಿವಿಧ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ತಂಡದವರು ವೈವಿಧ್ಯಮಯ ಕಾರ್ಯಕ್ರಮ ನೀಡಿ ಮನ ಸೆಳೆದರು.
ಇದೇ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಆಯೋಜಿತ ಕ್ಯಾನ್ಸರ್ ತಪಾಸಣಾ ಶಿಬಿರದ ಪ್ರಯೋಜನವನ್ನು ಮಹಿಳೆಯರು ಪಡೆದರು. ಮಹಿಳೆಗೆ ಸಂಬಂಧಿಸಿದ ವಿಚಾರಗೋಷ್ಠಿಯಲ್ಲಿ ಮಿಲನಾ ಭರತ್, ಡಾ.ಬಿ.ಕೆ.ರಾಜೇಶ್ವರಿ, ವೈದ್ಯಾಧಿಕಾರಿ ಡಾ.ಸುಮುಖ್, ವಕೀಲರಾದ ಸಿಂಧೂರ ಎನ್.ಸ್ವಾಮಿ, ಯೋಗ ಶಿಕ್ಷಕರಾದ ಶಿಲ್ಪ ರೈ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಧನಂಜಯ, ಖಜಾಂಚಿ ಪ್ರಸಾದ್ ಗೌಡ ಇತರರಿದ್ದರು.