ಕುಶಾಲನಗರದ ಎನ್‌ಟಿಸಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್ ಮಾತನಾಡಿದರು. ಬಿ.ಎನ್.ಪುಷ್ಪಾ, ಮಿಲನಾ ಭರತ್ ಇತರರಿದ್ದರು. 
ಕೊಡಗು

ಮಹಿಳೆಯರು ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಅಗತ್ಯ

ಕುಶಾಲನಗರ: ಕುಟುಂಬ ನಿರ್ವಹಣೆ ಹಾಗೂ ವೃತ್ತಿ ಜೀವನದಲ್ಲಿ ಮಹಿಳೆಯರ ಕರ್ತವ್ಯ, ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಡಯಟ್ ಹಿರಿಯ ಉಪನ್ಯಾಸಕಿ ಬಿ.ಎನ್.ಪುಷ್ಪಾ ಹೇಳಿದರು.
ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಸಹಯೋಗದಲ್ಲಿ ಎನ್‌ಟಿಸಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬ ನಿರ್ವಹಣೆಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಾಗಿದೆ. ಮನೆಯಲ್ಲಿ, ಸಮಾಜದಲ್ಲಿ, ವೃತ್ತಿ ಜೀವನದಲ್ಲಿ ಗೌರವ ಗಳಿಸುವುದು ನಮ್ಮ ನಡವಳಿಕೆ ಹಾಗೂ ಸಾಮರ್ಥ್ಯದಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮಹಿಳೆಯರು ಹೆಚ್ಚಿನ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ ಎಂದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಭಯ ಮುಕ್ತ ವಾತಾವರಣ ಕಲ್ಪಿಸಿಕೊಡುವುದು ಮುಖ್ಯ. ಮಹಿಳೆಯರ ಹಕ್ಕುಗಳಿಗೆ ಕುಂದು ಬಾರದಂತೆ ನಡೆದುಕೊಳ್ಳುವುದೆ ಮಹಿಳೆಯರಿಗೆ ನೀಡುವ ನಿಜವಾದ ಗೌರವ. ಮಹಿಳೆಯರು ಸುಶಿಕ್ಷತರಾಗಬೇಕಿದೆ. ಧೈರ್ಯ ಮೈಗೂಡಿಸಿಕೊಂಡು ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಒದಗಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಕುಶಾಲನಗರ ಟೌನ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಪ್ರದೀಪ್ ಕುಮಾರ್ ಅವರು, ಮಹಿಳಾ ಸುರಕ್ಷತಾ ಕಾನೂನುಗಳ ಬಗ್ಗೆ ಮಾತನಾಡಿದರು. ಎನ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಿ ಆಶಾ, ಕುಶಾಲನಗರ ಟೌನ್ ಪೊಲೀಸ್ ಸಿಬ್ಬಂದಿ ಎಚ್.ಟಿ.ಗೀತಾ, ಶಿವಣ್ಣ, ಸಂಚಾರ ಠಾಣಾಧಿಕಾರಿ ಗಣೇಶ್, ಎನ್.ಟಿ.ಸಿ ಮಾಲೀಕ ಅಬ್ದುಲ್ ಸಲಾಂ, ಸಿಬ್ಬಂದಿ ಜ್ಯೋತಿ, ಧನ್ಯ, ಶಶಿ, ಉಪನ್ಯಾಸಕಿ ಹೇಮಲತಾ ಇದ್ದರು.