ಸೋಮವಾರಪೇಟೆ ತಾಲೂಕು ಕನ್ನಡ ಸಿರಿ ಬಳಗದ ಆಶ್ರಯದಲ್ಲಿ ಪಟ್ಟಣದ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಿರಿ-ಕಲಾವೈಭವ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಿತು
ಸೋಮವಾರಪೇಟೆ: ಮಹಿಳೆಯರು ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದಿದ್ದು, ಸಂಸಾರದಂತಹ ದೊಡ್ಡ ಜವಾಬ್ದಾರಿಯ ಹಿಂದೆ ಹೆಣ್ಣಿದ್ದಾಳೆ ಎಂದರೆ ಅತಿಶಯೋಕ್ತಿಯಲ್ಲ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು.
ಜಿಲ್ಲೆಯ ಕನ್ನಡ ಸಿರಿ ಬಳಗದ ಆಶ್ರಯದಲ್ಲಿ ಶುಕ್ರವಾರ ಪಟ್ಟಣದ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಿರಿ- ಕಲಾವೈಭವ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಬುದ್ಧಿವಂತರು ಹಾಗೂ ಜ್ಞಾನವಂತರಾಗಿರುತ್ತಾರೆ. ಯಾವುದೇ ಸನ್ನಿವೇಶದಲ್ಲಿಯೂ ಸಮತೋಲನವನ್ನು ಸಾಧಿಸಿ ಸದೃಢ ಮನಸ್ಸಿನಿಂದ ಕೆಲಸ ಮಾಡುವ ಹೆಣ್ಣು ಸಂಸಾರದ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ ಎಂದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಪಟ್ಟಣದ ಸಂತ ಜೋಸೆಫರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಛಾಯಾ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಿರಿ ಬಳಗದ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ.ಜವರಪ್ಪ ವಹಿಸಿದ್ದರು. ಬಳಗದ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ತಾಲೂಕು ಕಾರ್ಯದರ್ಶಿ ಎಲ್.ಎಂ.ಪ್ರೇಮಾ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ, ಹಿರಿಯ ಸಾಹಿತಿ ನ.ಲ.ವಿಜಯ ಮತ್ತಿತರರು ಇದ್ದರು.
ಇದೇ ಸಂದರ್ಭ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಾದ ಶಿವಮ್ಮ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿಯರಾದ ಆಶಾ ಹಾಗೂ ಕವಿತಾ ಕಾರ್ಯಕ್ರಮ ನಿರ್ವಹಿಸಿದರು. ಪಟ್ಟಣದ ವಿವಿಧ ಮಹಿಳಾ ಸಂಘಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.