ವಸತಿರಹಿತರ ಸ್ವಂತ ಸೂರಿನ ಕನಸುಗಳು ಇಂಥ ತೋಟದ ಲೈನ್ ಮನೆಗಳಲ್ಲೇ ಕರಗಿಹೋಗುತ್ತಿವೆ
ವಸತಿ ರಹಿತರು ಮತ್ತು ನಿವೇಶನ ರಹಿತರ ಸಂಖ್ಯೆ ಕೊಡಗಿನಲ್ಲಿ ಹೆಚ್ಚುತ್ತಲೇ ಹೋಗುತ್ತಿದೆ. ಸೂರಿಲ್ಲದವರ ಸಂಖ್ಯೆಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಮಂಜೂರಾಗುತ್ತಿರುವ ಮನೆಗಳ ಸಂಖ್ಯೆಗೂ ಅಜಗಜಾಂತರ ಇರುವುದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಕೊಡಗು ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಿಂದ ಆವೃತವಾಗಿರುವುದರಿಂದ ಇಲ್ಲಿ ನಿವೇಶನ ಮತ್ತು ವಸತಿ ಸಮಸ್ಯೆಗಳು ಉಳಿದ ಜಿಲ್ಲೆಗಳಿಗಿಂತ ಕೊಂಚ ಭಿನ್ನವಾಗಿದೆ. ಇಲ್ಲಿನ ಕೂಲಿ ಕಾರ್ಮಿಕರು, ಲೈನ್ ಮನೆಗಳಲ್ಲಿ ವಾಸಿಸುವ ತೋಟದ ಕಾರ್ಮಿಕರು ಮತ್ತು ಬಡ ಕುಟುಂಬಗಳು ನಿವೇಶನ ಹಾಗೂ ವಸತಿಗಾಗಿ ದಶಕಗಳಿಂದ ಹೋರಾಡುತ್ತಿದ್ದಾರೆ.
ಕೊಡಗಿನಲ್ಲಿ ಹೆಚ್ಚಿನ ಭೂಮಿ ಕಾಫಿ ತೋಟಗಳು, ಮೀಸಲು ಅರಣ್ಯ ಮತ್ತು ಪೈಸಾರಿ ಜಮೀನುಗಳಾಗಿವೆ. ವಸತಿ ಯೋಜನೆಗಳಿಗೆ ಯೋಗ್ಯವಾದ ಸರ್ಕಾರಿ ಜಮೀನು ಸಿಗುವುದೇ ಇಲ್ಲಿ ದೊಡ್ಡ ಸವಾಲಾಗಿದೆ. ತೋಟಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಇಂದಿಗೂ ಮಾಲೀಕರು ನೀಡಿದ ತೋಟದ ಲೈನ್ ಮನೆಗಳಲ್ಲಿಯೇ ವಾಸಿಸುತ್ತಿದ್ದಾರೆ. ಸ್ವಂತ ಸೂರಿಲ್ಲದ ಇವರಿಗೆ ನಿವೇಶನ ಒದಗಿಸಬೇಕು ಎನ್ನುವುದು ದೊಡ್ಡ ಬೇಡಿಕೆಯಾಗಿದೆ.
2018ರ ಭೀಕರ ಭೂಕುಸಿತ ಮತ್ತು ಪ್ರವಾಹದ ನಂತರ ನೂರಾರು ಕುಟುಂಬಗಳು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಕೊಡಗಿನಲ್ಲಿ ಸರ್ಕಾರಿ ಜಾಗದ ಕೊರತೆ ಇರುವುದರಿಂದ, ಸರ್ಕಾರವೇ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಸಿ ವಸತಿ ರಹಿತರಿಗೆ ಲೇಔಟ್ ಮಾಡಿ ನೀಡುವ ಪ್ರಕ್ರಿಯೆಗೂ ಮುಂದಾಗಿದೆ. ಈ ಮಧ್ಯೆ ದೊಡ್ಡ ಪ್ರಮಾಣದ ಸರ್ಕಾರಿ ಭೂಮಿ ಅತಿಕ್ರಮಣವಾಗಿದ್ದು, ಸರ್ಕಾರ ಇವುಗಳನ್ನು ವಶಪಡಿಸಿಕೊಂಡರೆ ಸೂರಿನ ಭಾಗ್ಯ ಕಲ್ಪಿಸುವುಸು ಕಷ್ಟವೇನಲ್ಲ ಎನ್ನುವ ಅಭಿಪ್ರಾಯಗಳೂ ಇವೆ.
"
ಕೊಡಗಿನಲ್ಲಿ ಅನೇಕ ಲೈನ್ ಮನೆಗಳಲ್ಲಿರುವ ಅಥವಾ ಬಾಡಿಗೆ ಮನೆಗಳಲ್ಲಿರುವ ನಿವೇಶನ ರಹಿತರಿಗೆ ನಿವೇಶನ, ವಸತಿ ಹಾಗೂ ಮೂಲ ಸೌಕರ್ಯಗಳು ಇಲ್ಲದೆ ಅವರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಸಂಬAಧಪಟ್ಟ ಸರಿಯಾದ ದಾಖಲಾತಿಗಳಿಲ್ಲದೆಯೇ ಇವರು ಸೂರಿನ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸಂಬAಧಿಸಿದ ಅಧಿಕಾರಿಗಳು ಬಡವರ ಪರವಾಗಿ ಕೆಲಸ ಮಾಡದೆ ಉಳ್ಳವರ ಪರವಾಗಿಯೇ ಒತ್ತುವರಿ ಮಾಡುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ.
— ಗಾಯತ್ರಿ ನರಸಿಂಹ, ಜಿಲ್ಲಾ ಸಂಚಾಲಕಿ, ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು
"
ಸರ್ಕಾರಕ್ಕೆ ಬಡವರ ಪರ ಕಾಳಜಿ ಇಲ್ಲ. ಬಡವರನ್ನು ಕೇವಲ ಮತ ಬ್ಯಾಂಕುಗಳಾಗಿ ಅಷ್ಟೇ ಬಳಸಿಕೊಳ್ಳುತ್ತಿದ್ದಾರೆ. ನಿವೇಶನದ ಕನಸು ಕಂಡ ಬಡವರಿಗೆ ನಿವೇಶನ ಒದಗಿಸಲು ಒತ್ತುವರಿ ಸರ್ಕಾರಿ ಭೂಮಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು. ಕೊಡಗಿನಾದ್ಯಂತ ಎಲ್ಲಾ ಪಂಚಾಯಿತಿಗಳ ಹೆಸರಿಗೆ ಕನಿಷ್ಠ 50 ಎಕರೆ ಭೂಮಿ ಕಾಯ್ದಿರಿಸಬೇಕು. ಹೀಗೆ ಮಾಡುವುದರಿಂದ ಪ್ರತಿ ನಿವೇಶನ ರಹಿತರಿಗೆ ಕನಿಷ್ಠ ನಿವೇಶನ ಒದಗಿಸಬಹುದು. ಹಲವು ಭಾಗ್ಯಗಳನ್ನು ನೀಡುವುದಕ್ಕಿಂದ ನೆರಳು ಭಾಗ್ಯವನ್ನು ನೀಡುವುದರಿಂದ ಭಾರತದ ನೈಜ ಸ್ವಾತಂತ್ರ‍್ಯ ಪದಕ್ಕೆ ಸರಿಯಾದ ಅರ್ಥ ಬರುತ್ತದೆ.
— ಮೊಣ್ಣಪ್ಪ, ಜಿಲ್ಲಾಧ್ಯಕ್ಷ, ಬಹುಜನ ಕಾರ್ಮಿಕರ ಸಂಘ
"
ಕೊಡಗು ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಮತ್ತು ಬಡ ಕುಟುಂಬಗಳು ಹಲವು ವರ್ಷಗಳಿಂದ ಸ್ವಂತ ಮನೆ ಅಥವಾ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಮನೆ ಮತ್ತು ಜಾಗ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲ. ತೋಟಗಳ ಲೈನ್ ಮನೆಗಳಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಅನೇಕ ಕುಟುಂಬಗಳ ಸೂರಿನ ಕನಸು ಇನ್ನೂ ನನಸಾಗಿಲ್ಲ. ವಸತಿ ಎನ್ನುವುದು ಮೂಲಭೂತ ಹಕ್ಕಾಗಿದ್ದು, ಸರ್ಕಾರವು ನಿವೇಶನ ರಹಿತರು ಹಾಗೂ ವಸತಿರಹಿತರ ಸಮಗ್ರ ಸಮೀಕ್ಷೆ ನಡೆಸಿ, ಅರ್ಹರಿಗೆ ಶೀಘ್ರವಾಗಿ ನಿವೇಶನ ಮತ್ತು ಮನೆ ಒದಗಿಸುವತ್ತ ಕ್ರಮ ಕೈಗೊಳ್ಳಬೇಕು.
— ಶಿವಪ್ಪ ಮೊಗೇರ, ಕಾರ್ಮಿಕ, ತೋಳೂರು ಶೆಟ್ಟಳ್ಳಿ ಗ್ರಾಮ
"
ಜಿಲ್ಲೆಗೆ 1200 ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನಲ್ಲಿ 527 ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ವಿರಾಜಪೇಟೆ ವಿಧಾನಸಭಾ ವ್ಯಾಪ್ತಿಯ ಪೆರಾಜೆ, ಚೆಂಬು, ಸಂಪಾಜೆ, ಮದೆ, ಬೆಟ್ಟಗೇರಿ, ಚೇರಂಬಾಣೆ, ಕುಂದಚೇರಿ ಭಾಗಮಂಡಲ, ಕರಿಕೆ, ಅಯ್ಯಂಗೇರಿ, ಬಲ್ಲಮಾವಟಿ, ಎಮ್ಮೆಮಾಡು ನಾಪೋಕ್ಲು, ಕುಂಜಿಲ-ಕಕ್ಕಬ್ಬೆ, ನರಿಯಂದಡ, ಹಾಕತ್ತೂರು, ಮೇಕೇರಿ, ಕೊಣಂಜಗೇರಿ ಗ್ರಾ.ಪಂ.ವ್ಯಾಪ್ತಿಯ 427 ಅರ್ಹ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವ ಸಂಬAಧ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ನಿವೇಶನ ಗುರುತಿಸಿ ಫಲಾನುಭವಿಗಳಿಗೆ ಮನೆ ನಿರ್ಮಿಸಲಾಗುವುದು
— ಶೇಖರ್, ಕಾರ್ಯ ನಿರ್ವಹಣಾಧಿಕಾರಿ, ಮಡಿಕೇರಿ ತಾಲೂಕು ಪಂಚಾಯಿತಿ