ಬೇಟೋಳಿ ಗ್ರಾಮದ ಶ್ರೀ ಭದ್ರಕಾಳಿ ದೇವರಕಾಡುವಿನಲ್ಲಿ ಕಾಡ್ಗಿಚ್ಚು ತಡೆಗಟ್ಟುವ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು ಜಗನ್ನಾಥ್ , ಶಿವರಾಂ , ಗೋಪಾಲ್ , ಮಹದೇವ್ , ಮಂಜೇಗೌಡ ಇದ್ದರು.
- ಶ್ರೀಭದ್ರಕಾಳಿ ದೇವರ ಕಾಡಿನಲ್ಲಿ ಅರಣ್ಯ ಇಲಾಖೆಯಿಂದ ಆಯೋಜನೆ
ವಿರಾಜಪೇಟೆ: ಅರಣ್ಯ ಇಲಾಖೆ ವಿರಾಜಪೇಟೆ ವಿಭಾಗದ ವತಿಯಿಂದ ಬೇಟೋಳಿ ಗ್ರಾಮದ ಶ್ರೀ ಭದ್ರಕಾಳಿ ದೇವರಕಾಡುವಿನಲ್ಲಿ ಕಾಳ್ಗಿಚ್ಚು ನಂದಿಸುವ ಕುರಿತು ಸಿಬ್ಬಂದಿಗೆ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಅವರು ಮಾತನಾಡಿ, ಅರಣ್ಯ ಇಲಾಖೆಯಿಂದ ಮುನ್ನೆಚ್ಚರಿಕೆಯಾಗಿ ಬೇಸಿಗೆ ತಾಪ ಹೆಚ್ಚಾಗುವ ಮೊದಲೇ ಕಾಳ್ಗಿಚ್ಚು ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಸಿಬ್ಬಂದಿ ನೇಮಕ ಹಾಗೂ ಫೈರ್‌ಲೈನ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಸಂಪನ್ಮೂಲಗಳ ಬಳಕೆ, ಚೆಕ್‌ಡ್ಯಾಮ್, ನೀರಿನ ಟ್ಯಾಂಕ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ಇತರ ಇಲಾಖೆಗಳ ಸಹಕಾರದಿಂದ ಅಗತ್ಯ ಬಿದ್ದಾಗ ಅಗ್ನಿಶಾಮಕ ದಳ ಮತ್ತು ವಿವಿಧ ಇಲಾಖೆಗಳ ನೆರವು ಪಡೆಯುವುದು ಇನ್ನಿತರ ವಿಚಾರಗಳನ್ನು ಅರಣ್ಯ ಇಲಾಖೆಯ ಎಲ್ಲ ಸಿಬ್ಬಂದಿಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡುವ ಮೂಲಕ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಸಾರ್ವಜನಿಕರು ಸಹ ಸೂಕ್ತ ವಾಗಿ ಸ್ಪಂದಿಸಬೇಕಾಗಿದೆ. ಮುಖ್ಯವಾಗಿ ಅರಣ್ಯ ಸಂಪತ್ತಿಗೆ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಧಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ನಮ್ಮ ಇಲಾಖೆಯ ಎಲ್ಲ ಸಿಬ್ಬಂದಿಗೆ ಬೆಂಕಿ ನಂದಿಸುವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ತಹಸಿನ ಭಾನು, ತಿತಿಮತಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಮ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ, ಮಾಕುಟ್ಟ ವಲಯ ಅರಣ್ಯ ಅಧಿಕಾರಿ ಮಹದೇವ್, ಮುಂಡ್ರೋಟ್ ವಲಯ ಅರಣ್ಯಾಧಿಕಾರಿ ಅರುಣ್, ಅಗ್ನಿಶಾಮಕ ದಳದ ಅಧಿಕಾರಿ ಮಂಜೇಗೌಡ, ಸಿಬ್ಬಂದಿ ಹನುಮಂತ ಇತರರು ಇದ್ದರು.