ಸುಂಟಿಕೊಪ್ಪ: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ವನ್ಯ ಜೀವಿ ಹಾವಳಿ ಪರಿಹಾರಕ್ಕೆ ಶಾಸಕರು, ಅರಣ್ಯಾಧಿಕಾರಿಗಳ ಸಮುಖದಲ್ಲಿ ಸಾರ್ವಜನಿಕರ ಸಭೆ ನಡೆದ 48 ಗಂಟೆಗಳಲ್ಲೇ ಈ ಭಾಗಕ್ಕೆ 4 ಕಾಡಾನೆಗಳು ಲಗ್ಗೆಯಿಟ್ಟು ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸಿದೆ.
ಬುಧವಾರ ಸಂಜೆ ಇಲ್ಲಿನ ಸ್ವಾಮಿ ತೋಟಕ್ಕಾಗಿ ಆಹಾರ ಅರಸಿ ಬಂದ ಕಾಡಾನೆಗಳ ಹಿಂಡು ಹಲವು ಕೃಷಿ ಫಸಲುಗಳನ್ನು ತಿಂದು ನಾಶಪಡಿಸಿ ನಂತರ ಬಾಳೆಕಾಡು ತೋಟಕ್ಕೆ ನುಗ್ಗಿದ ಕಾಡಾನೆಗಳು ಅಲ್ಲಿಯೂ ಕೃಷಿ ಫಸಲುಗಳನ್ನು ತಿಂದು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕೃಷಿ ಫಸಲುಗಳನ್ನು ತಿಂದು ನಾಶಗೊಳಿಸಿದ ಬಳಿಕ ಕೂರ್ಗ್ ಪೌಂಡೇಷನ್‌ನ ಸ್ವಸ್ಥ ಶಾಲೆಯ ಬಳಿ ಬಂದು ನಿಂತಿವೆ. ಸಾರ್ವಜನಿಕರನ್ನು ಕಂಡ ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಗಳ ಹಿಂಡನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಓಡಿಸುವ ಕಾರ್ಯಚರಣೆ ನಡೆಸಿದರು.