ಕಾಡಾನೆ ದಾಳಿಯಿಂದ ಕಾರು ಜಖಂಗೊಂಡಿರುವುದು.
- ಕೆಲಸಕ್ಕೆ ತೆರಳುವಾಗ ಬಾಡಗ-ಬಾಣಂಗಾಲ ಬಳಿ ಅವಘಡ
- ಚಾಲಕ, ಕಾರ್ಮಿಕರು ಪ್ರಾಣಾಪಾಯದಿಂದ ಪಾರು
ಸಿದ್ದಾಪುರ: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ-ಬಾಣಂಗಾಲ ಸಮೀಪದ ಶಿಲ್ಪಿ ಎಸ್ಟೇಟ್‌ಗೆ ಬುಧವಾರ ಕೆಲಸಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊಂಡಿದೆ.
ಎಸ್ಟೇಟ್ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕಾರು ಬಾಡಗ-ಬಾಣಂಗಾಲ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಕಾಡಿನಿಂದ ಬಂದ ಕಾಡಾನೆ ದಾಳಿ ನಡೆಸಿದೆ. ಆನೆಯು ಕಾರನ್ನು ಮುಂಭಾಗಕ್ಕೆ ಹಾಗೂ ಬದಿಗೆ ತಳ್ಳಿದ ಪರಿಣಾಮ ವಾಹನಕ್ಕೆ ಹಾನಿಯಾಗಿದೆ.
ಚಾಲಕ ಗೋಣಿಕೊಪ್ಪ ನಿವಾಸಿ ಸುಭಾಷ್ ಹಾಗೂ ಕಾರ್ಮಿಕರು ಆತಂಕಗೊಂಡರೂ ಸಮಯಪ್ರಜ್ಞೆ ಮೆರೆದಿದ್ದು, ವಾಹನದಿಂದ ಸುರಕ್ಷಿತವಾಗಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.