ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಪಧಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಿರಿಯ ಪತ್ರಕರ್ತ ಮುರಳೀಧರ ಉದ್ಘಾಟಿಸಿದರು. ಕೆ. ಎನ್. ದೀಪಕ್, ಆಸೀಫ್, ವಸಂತ ಮತ್ತಿತರರು ಇದ್ದರು.
ಬೆಳಗಾವಿ ಸೇರಿದಂತೆ ಮುಂಬೈ ಸಂಸ್ಥಾನದಲ್ಲಿದ್ದ ಕನ್ನಡ ಮಾತನಾಡುವ ಪ್ರದೇಶಗಳು ಕರ್ನಾಟಕ ರಾಜ್ಯದಲ್ಲಿ ಉಳಿದಿರುವುದರ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳ ಕೊಡುಗೆ ಅಪಾರ ಎಂದು ಹಿರಿಯ ಪತ್ರಕರ್ತ ಮುರಳೀಧರ ಹೇಳಿದರು. ಇಲ್ಲಿನ ಖಾಸಗಿ ಸಭಾಂಗಣದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಈಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಪಧಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣವಾದ ನಂತರ ಕಾಸರಗೋಡು, ಹೊಸೂರು, ಬೆಳಗಾವಿಯ ಹಲವು ಕನ್ನಡ ಮಾತನಾಡುವ ಪ್ರದೇಶಗಳನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಸುಂದರ ರಾಜ್ಯವಾಗಿದ್ದ ಕೊಡಗು ರಾಜ್ಯಕ್ಕೆ ಅನ್ಯಾಯವಾಗಿದೆ. 24 ಶಾಸಕರಿದ್ದ, ಪ್ರತ್ಯೇಕ ಎಂಪಿ ಇದ್ದ ಕೊಡಗಿಗೆ ಏಕೀಕರಣದ ನಂತರ 2 ಶಾಸಕ ಸ್ಥಾನಕ್ಕೆ ಮೀಸಲಾಯಿತು. ಇದ್ದ ಸಂಸತ್ ಸ್ಥಾನವೂ ಹೋಯಿತು. ಮುಂದೆ 1 ಶಾಸಕ ಸ್ಥಾನಕ್ಕೆ ಇಳಿಯುವ ಎಲ್ಲಾ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ಹೋರಾಟ ನಡೆದುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಕರವೇ ಜಿಲ್ಲಾ ಅಧ್ಯಕ್ಷ ಕೆ. ಎನ್. ದೀಪಕ್ ಮಾತನಾಡಿ ನಾಡು, ನುಡಿ ರಕ್ಷಣೆಗೆ ಕಟ್ಟಿಬದ್ಧರಾಗಿದ್ದೇವೆ. ಇದರೊಂದಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಲು ಜೀವದ ಕೊನೆಯುಸಿರಿರುವ ಹೋರಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಕೃಷಿ ವಿಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 34 ನೇ ರ‍್ಯಾಂಕ್ ಪಡೆದ ಸೋಮವಾರಪೇಟೆಯ ವಿದ್ಯಾರ್ಥಿ ಸೃಜನ್ ಅವರುಗಳನ್ನು ಸನ್ಮಾನಿಸಲಾಯಿತು.
ಕರವೇ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಆಸೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಘಟಕದ ಅಧ್ಯಕ್ಷ ವಸಂತ, ಪದಾಧಿಕಾರಿಗಳಾದ ಗಣೇಶ್, ಶಶಿಕಲಾ, ಸಂಧ್ಯಾ ಗಣೇಶ್, ರೇಣುಕಾ, ನಂಜಪ್ಪ, ಹರೀಶ್ ಮಂಜುನಾಥ್, ರವೀಶ್, ಪುರುಷೋತ್ತಮ್, ಮತ್ತಿತರರು ಇದ್ದರು.